'ಕಾಂತಾರ' ಸಿನಿಮಾ ಖ್ಯಾತಿಯ ಕನ್ನಡದ ನಟ ಹಾಗೂ ಚಲನಚಿತ್ರ ನಿರ್ದೇಶಕ ರಿಷಬ್ ಶೆಟ್ಟಿ ಅವರು ಈಗಾಗಲೇ ಅನೇಕ ಕಾರ್ಯಕ್ರಮಗಳಲ್ಲಿ ಮಾತೃ ಭಾಷೆಯಲ್ಲೇ ಮಾತನಾಡಿ ಸ್ಯಾಂಡಲ್ವುಡ್ಗೆ ಕೀರ್ತಿ ತಂದಿದ್ದಾರೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಸಾಗಿ ವಿಶ್ವಸಂಸ್ಥೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಲಿರುವ ಅವರು ಕನ್ನಡದಲ್ಲೇ ಮಾತಾಡುತ್ತಾರೆ ಎಂಬುದು ನಾಡಿನ ಜನತೆಗೆ ಮತ್ತಷ್ಟು ಸಂತಸ ತಂದಿದೆ.
ಕಳೆದ ಕೆಲವು ದಿನಗಳಿಂದ ವಿಶ್ವಸಂಸ್ಥೆಯ ವಾರ್ಷಿಕ ಸಭೆ ನಡೆಯುತ್ತಿದೆ. ಜಗತ್ತಿನ ಅನೇಕ ದೇಶಗಳ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿ ಸದ್ಯದ ಪರಿಸ್ಥಿತಿಯಲ್ಲಿ ವಿಶ್ವ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಈ ವಾರ್ಷಿಕ ಸಭೆಯಲ್ಲಿ ಇದೀಗ ಡಿವೈನ್ ಸ್ಟಾರ್ ಖ್ಯಾತಿಯ ರಿಷಬ್ ಶೆಟ್ಟಿ ಸಹ ಭಾಗವಹಿಸಲಿದ್ದು, ಕನ್ನಡ ಡಿಂಡಿಮ ಮೊಳಗಿಸಲಿದ್ದಾರೆ. ಇದರ ಜೊತೆಗೆ ವಿವಿಧ ದೇಶಗಳ ಪ್ರತಿನಿಧಿಗಳನ್ನು ಉದ್ದೇಶಿಸಿ ಶೆಟ್ಟಿ ಮಾತನಾಡುವರು.
ಈ ಕುರಿತು ಕರ್ನಾಟಕ ಬಿಜೆಪಿ ಅಧಿಕೃತ ಟ್ವಿಟರ್ನಲ್ಲಿ ಪೋಸ್ಟ್ವೊಂದನ್ನು ಹಾಕಿದ್ದು, 'ಕನ್ನಡಿಗರಿಗಿಂದು ಸಂಭ್ರಮದ ದಿನ. ಪ್ರತಿಷ್ಠಿತ ವಿಶ್ವಸಂಸ್ಥೆಯಲ್ಲಿ ಕರ್ನಾಟಕದ ಸುಪುತ್ರ ರಿಷಬ್ ಶೆಟ್ಟಿ ಭಾರತವನ್ನು ಪ್ರತಿನಿಧಿಸಿ ಕನ್ನಡದಲ್ಲೇ ಮಾತಾಡುತ್ತಾರೆ ಎಂಬುದು ಕನ್ನಡ ನಾಡಿಗೆ ಹೆಮ್ಮೆ ತಂದಿದೆ. ಕನ್ನಡ, ಕನ್ನಡಿಗರನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಗುರುತಿಸುವ, ಗೌರವಿಸುವ ಯಾವ ಅವಕಾಶವನ್ನೂ ಬಿಟ್ಟಿಲ್ಲ' ಎಂದು ತಿಳಿಸಿದೆ.
ಇದನ್ನೂ ಓದಿ:ಭರವಸೆಯ ನಟನಾಗಿ ಕಾಂತಾರ ಸ್ಟಾರ್: ಫಾಲ್ಕೆ ಪ್ರಶಸ್ತಿ 2023ರ ಸುಂದರ ಕ್ಷಣಗಳು