ಕಾಂತಾರ.. ಇಡೀ ಭಾರತೀಯ ಚಿತ್ರರಂಗದಲ್ಲೇ ಸದ್ದು ಮಾಡಿದ ಸೂಪರ್ ಹಿಟ್ ಸಿನಿಮಾ. 16 ಕೋಟಿ ಬಂಡವಾಳದಲ್ಲಿ ನಿರ್ಮಾಣಗೊಂಡ ಈ ಚಿತ್ರ 400 ಕೋಟಿ ರೂ. ಸಂಪಾದಿಸಿದೆ. ಸಿನಿಮಾ ಬಿಡುಗಡೆ ಕಂಡು 60 ದಿನಗಳಾದರೂ ಪ್ರೇಕ್ಷಕರ ಸಂಖ್ಯೆ ಕಡಿಮೆ ಆಗಿಲ್ಲ. ಪದೇ ಪದೇ ಆ ಸಿನಿಮಾ ವೀಕ್ಷಿಸುವವರ ಸಂಖ್ಯೆ ಹೆಚ್ಚುತ್ತಿದೆ. ಇತ್ತೀಚಿನ ಖಾಸಗಿ ಚಾನಲ್ವೊಂದು ನಡೆಸಿದ ಸಂದರ್ಶನವೊಂದರಲ್ಲಿ 'ಕನ್ನಡ ಚಿತ್ರರಂಗವೇ ನನ್ನ ಕರ್ಮಭೂಮಿ' ಎಂದು ಕಾಂತಾರ ಸಾರಥಿ ರಿಷಬ್ ಶೆಟ್ಟಿ ತಿಳಿಸಿದ್ದಾರೆ. ಕಾಂತಾರ ಎರಡನೇ ಭಾಗದ ಬಗ್ಗೆಯೂ ರಿಷಬ್ ಮಾತನಾಡಿದ್ದಾರೆ.
ನೀವು ಹಿಂದಿ ಚಿತ್ರಗಳಲ್ಲಿ ನಟಿಸಲು ಸಿದ್ಧರಿದ್ದೀರಾ ಎಂಬ ಪ್ರಶ್ನೆಗೆ ರಿಷಬ್, ಕನ್ನಡ ಚಿತ್ರರಂಗವೇ ನನ್ನ ಕರ್ಮಭೂಮಿ ಎಂದು ತಿಳಿಸಿದ್ದಾರೆ. ಕನ್ನಡ ಸಿನಿಮಾಗಳನ್ನೇ ಮಾಡಬೇಕು ಅನ್ನೋದು ನನ್ನ ಆಸೆ. ಏಕೆಂದರೆ ನಟ, ನಿರ್ದೇಶಕ ಮತ್ತು ಬರಹಗಾರರಾಗಿ ಜನರಿಗೆ ತಲುಪಲು ಕನ್ನಡವೇ ಉತ್ತಮ ವೇದಿಕೆಯಾಗಿದೆ. ಕಾಂತಾರ ಯಶಸ್ಸಿಗೆ ಕನ್ನಡ ಇಂಡಸ್ಟ್ರಿ ಮತ್ತು ಕನ್ನಡಿಗರು ಕಾರಣ. ಅವರಿಂದಲೇ ನಾನು ಇಲ್ಲಿದ್ದೇನೆ. ಹಾಗಾಗಿ ಕನ್ನಡ ಚಿತ್ರಗಳನ್ನೇ ಮಾಡಬೇಕೆಂಬ ಆಸೆ ಇದೆ. ಅವಕಾಶ ಸಿಕ್ಕರೆ ಹಿಂದಿ ಹಾಗು ಇತರೆ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡಲಾಗುವುದು. ಭಾಷೆಗಳು ಸಿನಿಮಾಗೆ ತಡೆಗೋಡೆ ಆಗಿ ಉಳಿದಿಲ್ಲ ಎಂದು ತಿಳಿಸಿದರು.
ಕಾಂತಾರ ಸಿನಿಮಾ ಮಾಡುವಾಗ ಅದರ ಸವಾಲುಗಳ ಬಗ್ಗೆ ನಾವು ಅಂದು ಮಾತನಾಡಲಿಲ್ಲ. ಆದರೆ ಈಗ ಜನರು ಅದರ ಬಗ್ಗೆ ಕೇಳಿದಾಗ ನಾವು ಎದುರಿಸಿರುವ ಅಡೆತಡೆಗಳ ಬಗ್ಗೆ ಯೋಚಿಸುತ್ತೇವೆ. ಕಾಂತಾರ ಒಂದು ವರ್ಷದಲ್ಲಿ ಉತ್ತಮವಾಗಿ ನಿರ್ಮಾಣವಾಯಿತು ಎಂದು ಹೇಳಿದ್ದಾರೆ.