ಕನ್ನಡ ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಒಂದೊಳ್ಳೆ ಕಂಟೆಂಟ್ ಆಧಾರಿತ ಸಿನಿಮಾಗಳು ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಬಿಗ್ ಬಜೆಟ್ ಸಿನಿಮಾಗಳ ಅಬ್ಬರದ ನಡುವೆ ಕನ್ನಡದ ಕೆಲ ಸಣ್ಣ ಸಿನಿಮಾಗಳು ಭಾರತದ ಗಡಿಯಾಚೆಗೆ ಸಂಚರಿಸಿ ಅಲ್ಲಿನ ಚಿತ್ರೋತ್ಸವಗಳಲ್ಲಿ ಮನ್ನಣೆ ಗಳಿಸಿ, ಕನ್ನಡ ಚಿತ್ರೋದ್ಯಮದ ಕೀರ್ತಿ ಪತಾಕೆಯನ್ನು ಹಾರಿಸಿವೆ. ಈ ಸಾಲಿನಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ನಿರ್ಮಾಣದ 'ಶಿವಮ್ಮ' ಚಿತ್ರ ಪ್ರಪಂಚದಾದ್ಯಂತ ಮನ್ನಣೆ ಗಳಿಸಿದೆ. ಜೈಶಂಕರ್ ಆರ್ಯರ್ ನಿರ್ದೇಶನದ ಚೊಚ್ಚಲ ಚಿತ್ರ ಹಲವು ಪ್ರಶಸ್ತಿ, ಪ್ರಶಂಸೆಯನ್ನು ಮುಡಿಗೇರಿಸಿಕೊಂಡು ತನ್ನ ವರ್ಲ್ಡ್ ಟೂರ್ ಅನ್ನು ಮುಂದುವರಿಸಿದೆ.
ರಿಷಬ್ ಶೆಟ್ಟಿ ಪೋಸ್ಟ್:ಸಾಮಾಜಿಕ ಜಾಲತಾಣದಲ್ಲಿ ಶಿವಮ್ಮ ಸಿನಿಮಾ ಪೋಸ್ಟರ್ ಹಂಚಿಕೊಂಡಿರುವ ನಿರ್ಮಾಪಕ ರಿಷಬ್ ಶೆಟ್ಟಿ, ''ಕೊಪ್ಪಳ ಜಿಲ್ಲೆಯ ಯಾರೇಹಂಚಿನಾಳ ಗ್ರಾಮದಿಂದ ಶುರುವಾದ ಪ್ರಯಾಣ ಹತ್ತಾರು ದೇಶಗಳಲ್ಲಿ ಹಲವಾರು ಪ್ರಶಸ್ತಿ, ಪ್ರಶಂಸೆಗಳನ್ನು ಗಳಿಸಿದ್ದಲ್ಲದೇ ವಿದೇಶಿಗರ ಪ್ರೀತಿಗೂ ಪಾತ್ರವಾಗಿದೆ. 'ರಿಷಬ್ ಶೆಟ್ಟಿ ಫಿಲ್ಮ್ಸ್' ಸಂಸ್ಥೆಯ ಹೆಮ್ಮೆಯ 'ಶಿವಮ್ಮ' ಚಿತ್ರ ತನ್ನ ಗೆಲುವಿನ ಪ್ರಯಾಣವನ್ನು ಮುಂದುವರಿಸಿದೆ. ಚಿತ್ರಕ್ಕೆ ನಿಮ್ಮ ಶುಭಹಾರೈಕೆಗಳಿರಲಿ'' ಎಂದು ಬರೆದುಕೊಂಡಿದ್ದಾರೆ.
ಇದಕ್ಕೂ ಮುನ್ನ ಪೋಸ್ಟ್ ಒಂದನ್ನು ಮಾಡಿದ್ದ ರಿಷಬ್ ಶೆಟ್ಟಿ, ''ರಷ್ಯಾದಲ್ಲಿ ಜಯಭೇರಿಯಾಗಿ ಶಿವಮ್ಮ ನೇರವಾಗಿ ಆಸ್ಟ್ರೇಲಿಯಾಗೆ ಬರುತ್ತಿದ್ದಾರೆ. ಆಸ್ಟ್ರೇಲಿಯಾದ ಕನ್ನಡಿಗರು ಶಿವಮ್ಮಳನ್ನು ಬೆಳ್ಳಿಪರದೆಯ ಮೇಲೆ ಭೇಟಿಯಾಗಲು ಮರೆಯದಿರಿ'' ಎಂದು ಬರೆದುಕೊಂಡಿದ್ದರು. ಹೊಸಬರಿಗೆ ಅವಕಾಶ ಸಿಗಲಿ, ಪ್ರತಿಭೆಗಳು ಬೆಳೆಯುವಂತಾಗಲಿ, ಕಂಟೆಂಟ್ ಆಧಾರಿತ ಚಿತ್ರಗಳು ನಿರ್ಮಾಣವಾಗಲಿ ಎಂಬ ಕಾರಣಕ್ಕೆ 'ರಿಷಬ್ ಶೆಟ್ಟಿ ಫಿಲ್ಮ್ಸ್' ಸಂಸ್ಥೆಯನ್ನು ಹುಟ್ಟುಹಾಕಿರುವ ಡಿವೈನ್ ಸ್ಟಾರ್ ಸದ್ಯ ತಮ್ಮ ನಿರ್ಮಾಣದ 'ಶಿವಮ್ಮ' ಸಾಧನೆಯ ಅಲೆಯಲ್ಲಿ ತೇಲುತ್ತಿದ್ದಾರೆ