‘ಕಾಂತಾರ’ ಚಿತ್ರದಲ್ಲಿ ತೋರಿಸಿದಂತೆ ಅನುಕರಿಸುವ ಪ್ರೇಕ್ಷಕರಿಗೆ ನಟ ರಿಷಬ್ ಶೆಟ್ಟಿ ವಿಶೇಷ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ನಟನ ಮೈಮೇಲೆ ಬರುವ ದೈವದ ಸನ್ನಿವೇಶವನ್ನು ಚಿತ್ರದಲ್ಲಿ ತೋರಿಸಲಾಗಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಅದರಂತೆ ಆಡುತ್ತಿದ್ದಾರೆ ಎಂಬ ಕೆಲವು ವರ್ತಮಾನಗಳಿಗೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
‘ಕಾಂತಾರ’ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು ವ್ಯಾಪಕ ಜನಪ್ರಿಯತೆ ಗಳಿಸಿಕೊಳ್ಳುತ್ತಿದೆ. ಆರಂಭದಲ್ಲಿ ಕನ್ನಡದಲ್ಲಿ ಮಾತ್ರ ತೆರೆಕಂಡಿದ್ದು ಬಳಿಕ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಬಿಡುಗಡೆಗೊಂಡಿದೆ. ಚಿಕ್ಕ ಬಜೆಟ್ನಲ್ಲಿ ನಿರ್ಮಾಣವಾದ ಚಿತ್ರ ಕಲೆಕ್ಷನ್ ವಿಚಾರದಲ್ಲಿ ಹಲವು ದಾಖಲೆಗಳನ್ನೇ ಬರೆದಿದೆ.
ಸದ್ಯ ಚಿತ್ರದ ಪ್ರಚಾರದಲ್ಲಿ ತೊಡಗಿರುವ ರಿಷಬ್ ಶೆಟ್ಟಿ, ಸಿನಿಮಾ ನೋಡಿದ ಪ್ರೇಕ್ಷಕರು ಮೈಮೇಲೆ ದೇವರು ಬಂದಂತೆ ಮಾಡುತ್ತಿರುವ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ. ತುಳುನಾಡು ಮತ್ತು ಕರ್ನಾಟಕದ ಸಂಪ್ರದಾಯಗಳನ್ನು ಆಧರಿಸಿದ ಚಿತ್ರದಲ್ಲಿ ಭೂತಾರಾಧನೆಯನ್ನು ತೋರಿಸಲಾಗಿದೆ. ಅಲ್ಲಿ ಬಳಸಲಾದ ಸನ್ನಿವೇಶ ಮತ್ತು ಶಬ್ದಗಳನ್ನು ಅನುಕರಿಸಬೇಡಿ ಎಂದು ತಿಳಿಸಿದ್ದಾರೆ.