"ಕಾಂತಾರ ಒಂದು ದಂತಕಥೆ" ಅದರ ಟೈಟಲ್ನಂತೆ ಮುಂದಿನ ಪೀಳಿಗೆಗೆ ದಂತಕಥೆಯಾಗಿ ಉಳಿಯಲಿದೆ. ನಟ, ನಿರ್ದೆಶಕ ರಿಷಬ್ ಶೆಟ್ಟಿಗೆ ಹಲವಾರು ಪ್ರಶಸ್ತಿಗಳನ್ನು ತಂದು ಕೊಟ್ಟದ್ದಲ್ಲದೇ ಹಲವಾರು ದಾಖಲೆಗಳನ್ನು ತನ್ನ ಒಡಲಿಗೆ ಹಾಕಿಕೊಂಡಿದೆ. ಸುಮಾರು ಏಳು ಭಾಷೆಯಲ್ಲಿ ಬಿಡುಗಡೆಯಾದ ಸಿನಿಮಾಕ್ಕೆ ದಾದಾ ಸಾಹೇಬ್ ಫಾಲ್ಕೆಯ ಮತ್ತೊಂದು ಗರಿ ಸಂದಿದೆ.
ಕಾಂತಾರ ಸಿನಿಮಾದ ನಟನೆಗಾಗಿ (ಹಿಂದಿ) ರಿಷಬ್ ಶೆಟ್ಟಿಗೆ ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವ ಪ್ರಶಸ್ತಿ ದೊರೆತಿದೆ. ಕಾಂತಾರದ ಶಿವನ ಪ್ರಾತಕ್ಕೆ ಅತ್ಯಂತ ಭರವಸೆಯ ನಟ ಎಂಬ ಟೈಟಲ್ ಸಿಕ್ಕಿದೆ. ಸೋಮವಾರ ಮುಂಬೈನ ತಾಜ್ ಲ್ಯಾಂಡ್ಸ್ ಎಂಡ್ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಈ ಬಗ್ಗೆ ಟ್ವಿಟರ್ನಲ್ಲಿ ಈ ಸಂತಸವನ್ನು ಹಂಚಿಕೊಂಡಿರುವ ನಟ ರಿಷಬ್ ಶೆಟ್ಟಿ, ಈ ಪ್ರೀತಿ, ಪುರಸ್ಕಾರಕ್ಕೆ ನಾನು ಸದಾ ಚಿರಋಣಿ. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕಿರುವುದು ನನಗೆ ಇನ್ನಷ್ಟು ಸಿನೆಮಾ ಮಾಡಬೇಕೆಂಬ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಈ ಪ್ರಶಸ್ತಿಯನ್ನು ಗೌರವ ಮತ್ತು ಆಶೀರ್ವಾದ ಎಂದು ಭಾವಿಸುತ್ತೇನೆ. ಹಿಂದಿ ಕಾಂತಾರ ಸಿನಿಮಾಕ್ಕಾಗಿ ಅತ್ಯಂತ ಭರವಸೆಯ ನಟ ಪ್ರಶಸ್ತಿ ಸಿಕ್ಕಿದೆ ಎಂದು ಬರೆದುಕೊಂಡಿದ್ದಾರೆ.
ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವ ಪ್ರಶಸ್ತಿಯನ್ನು ರಿಶಬ್ ಶೆಟ್ಟಿ ದೈವ ನರ್ತಕರು, ಕಾಂತಾರ ತಂಡ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ನಿನ್ನೆ ವಿಧಿವಶರಾದ ಕನ್ನಡದ ಮೇರು ನಿರ್ದೇಶಕ ಭಗವಾನ್ ಅವರಿಗೆ ಅರ್ಪಿಸಿದ್ದಾರೆ.
ಪ್ರಶಸ್ತಿ ಸ್ವೀಕರಿಸಿದ ನಂತರ ಅಭಿನಂದನಾ ಪತ್ರವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿರುವ ಡಿವೈನ್ ಸ್ಟಾರ್, ಈ ಉನ್ನತ ಗೌರವ ಸಿಕ್ಕಿರುವುದು ನನಗೆ ಇನ್ನಷ್ಟು ಜವಾಬ್ದಾರಿ ಹೆಚ್ಚಿಸಿದೆ. ಈ ಪ್ರಶಸ್ತಿ ಸಿಕ್ಕಿರುವುದರ ಬಗ್ಗೆ ಪದಗಳಲ್ಲಿ ವರ್ಣಿಸಲು ಆಗುತ್ತಿಲ್ಲ. ಹೊಂಬಾಳೆ ಸಂಸ್ಥೆ ಮತ್ತು ವಿಜಯ್ ಕಿರಂಗದೂರು ಅವರು ಕೊಟ್ಟ ಅವಕಾಶಕ್ಕೆ ನಾನು ಋಣಿ. ಮುಂದೆ ಅವಕಾಶ ಸಿಕ್ಕಿದರೆ ಮತ್ತೆ ಹೊಂಬಾಳೆ ಫಿಲ್ಮಂ ಬ್ಯಾನರ್ ಅಡಿಯಲ್ಲಿ ಕೆಲಸ ಮಾಡಲು ಇಚ್ಛಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಇದೇ ವೇಳೆ ಇಡೀ ಸಿನಿಮಾ ತಂಡವನ್ನು ಮತ್ತು ಹೆಂಡತಿ ಪ್ರಗತಿ ಶೆಟ್ಟಿ ಅವರಿಗೂ ಪತ್ರದಲ್ಲಿ ಧನ್ಯವಾದ ಹೇಳಿದ್ದಾರೆ. "ನನ್ನ ಕನಸಿಗೆ ಸಹಕಾರವಾಗಿ ನಿಂತ ಸಿನಿಮಾದ ಎಲ್ಲಾ ತಂಡ ಮತ್ತು ತಂತ್ರಜ್ಞರನ್ನು ಈ ಕ್ಷಣ ನಾನು ನೆನೆಯುತ್ತೇನೆ ಹಾಗೇ ನನ್ನ ಬೆನ್ನೆಲುಬಾಗಿ ನಿಂತು ಬೆಂಬಲಿಸಿದ ಮಡದಿ ಪ್ರಗತಿ ಶೆಟ್ಟಿಗೂ ಧನ್ಯವಾದ" ಎಂದು ಹೇಳಿದ್ದಾರೆ.
ದಾದಾಸಾಹೇಬ್ ಫಾಲ್ಕೆ ಏಕೆ ನೀಡುತ್ತಾರೆ?:ಸಿನಿಮಾ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದ ಹಿರಿಯ ವ್ಯಕ್ತಿಗೆ ಕೇಂದ್ರ ಸರ್ಕಾರದ ವತಿಯಿಂದ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗುತ್ತದೆ. ಭಾರತ ಸರ್ಕಾರ ಈ ಅತ್ಯುನ್ನತವಾದ ಪ್ರಶಸ್ತಿ ನೀಡುತ್ತದೆ. ಆದರೆ ರಿಷಬ್ ಶೆಟ್ಟಿ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರತಿಷ್ಠಾನ ಪ್ರಶಸ್ತಿಯನ್ನು ವಿತರಿಸಿದೆ. ಇದು ಕೇಂದ್ರ ಸರ್ಕಾರದ ಪ್ರಶಸ್ತಿಯಲ್ಲ, ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವ ಪ್ರಶಸ್ತಿಯಾಗಿದೆ.
ಇದನ್ನೂ ಓದಿ:ರಿಷಬ್ ಶೆಟ್ಟಿಗೆ ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವ ಪ್ರಶಸ್ತಿ