2022ರಲ್ಲಿ ಕನ್ನಡ ಚಿತ್ರರಂಗದ ಖ್ಯಾತಿ ಉತ್ತುಂಗಕ್ಕೇರಿದೆ. ಬಗೆಬಗೆಯ ಸಿನಿಮಾಗಳು ನಿರ್ಮಾಣವಾಗುತ್ತಿವೆ. ಕಥೆ, ಕಾಸ್ಟಿಂಗ್, ಮೇಕಿಂಗ್ ವಿಷಯದಲ್ಲೀಗ ಸ್ಯಾಂಡಲ್ವುಡ್ ಫಸ್ಟ್ ಕ್ಲಾಸ್. ಕೆಜಿಎಫ್, ಕಾಂತಾರ ಎಂಬ ಸಿನಿಮಾ ಮೂಲಕ ಇಡೀ ಭಾರತೀಯ ಚಿತ್ರರಂಗ ಸ್ಯಾಂಡಲ್ವುಡ್ನತ್ತ ನೋಡುವಂತಾಯ್ತು.
ಸೂಪರ್ ಹಿಟ್ 'ಕಾಂತಾರ'ದಲ್ಲಿ ನಟಿಸಿ, ನಿರ್ದೇಶನ ಮಾಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ರಿಷಬ್ ಶೆಟ್ಟಿ ಬಂಟ್ವಾಳ ಸಮೀಪ ನಡೆದಿದೆ ಎನ್ನಲಾದ ಮುತ್ತೂರು ನಟ್ಟಿಲ ಪಂಜುರ್ಲಿ ದೈವದ ನೇಮೋತ್ಸವದಲ್ಲಿ ಭಾಗಿಯಾಗಿ ಪ್ರಸಾದ ಸ್ವೀಕರಿಸಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು 'ಆಶೀರ್ವದಿಸಲ್ಪಟ್ಟೆ' ಎಂದು ಬರೆದುಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದು, ಮೆಚ್ಚುಗೆ ಸಂಪಾದಿಸಿದೆ. ದೈವದ ಕುರಿತು ಸಾಮಾಜಿಕ ಜಾಲತಾಣದ ಬಳಕೆದಾರರು ಭಕ್ತಿ ವ್ಯಕ್ತಪಡಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸದ್ದು ಮಾಡುತ್ತಿದ್ದು, ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. 'ಎಲ್ಲರನ್ನೂ ಕಾಪಾಡು ಪಂಜುರ್ಲಿ' ಎಂದು ಓರ್ವ ಸಾಮಾಜಿಕ ಜಾಲತಾಣ ಬಳಕೆದಾರರು ಬರೆದಿದ್ದಾರೆ. ಮತ್ತೋರ್ವರು ಪ್ರತಿಕ್ರಿಯಿಸಿ, 'ರಿಷಬ್ ಸರ್ ಈ ಬಾರಿ ಯಾವುದೇ ವಿವಾದ ಆಗದಿರಲಿ ಅನ್ನೋದು ನನ್ನ ಪ್ರಾರ್ಥನೆ' ಎಂದು ತಿಳಿಸಿದ್ದಾರೆ. 'ಅಣ್ಣಾ ನಮಗೂ ನೇಮೋತ್ಸವ ನೋಡುವಾಸೆ ಮತ್ತೆ ಯಾವಾಗಲಾದರೂ ಮುಂಚೆಯೇ ತಿಳಿಸಿ ದಯಮಾಡಿ' ಎಂದು ಓರ್ವರು ಕಾಮೆಂಟ್ ಮಾಡಿದ್ದಾರೆ. 'ನೀವು ನರ್ತಕ ವೇಷ ಧರಿಸಿದಾಗ (ಕಾಂತಾರ ಸಿನಿಮಾದಲ್ಲಿ) ಇವರಂತೆಯೇ ಕಾಣುತ್ತೀರಿ' ಎಂದು ಓರ್ವರು ತಿಳಿಸಿದ್ದರೆ, 'ದ್ವಿಪಾತ್ರ ನೋಡಿದಂತಾಯಿತು, ದೈವ ನರ್ತಕರು ನಿಮ್ಮನ್ನೇ ಹೋಲುತ್ತಾರೆ' ಎಂದು ಮತ್ತೋರ್ವರು ಹೇಳಿದ್ದಾರೆ. ರೋಮಾಂಚನ, ಅದ್ಭುತ, ದೈವ ದರ್ಶನ, ಆಶೀರ್ವದಿಸಲ್ಪಟ್ಟೆವು ಎಂಬ ಪದಗಳು ಕಾಮೆಂಟ್ ವಿಭಾಗದಲ್ಲಿ ತುಂಬಿ ತುಳುಕುತ್ತಿದೆ. ಇಷ್ಟೇ ಅಲ್ಲದೇ, 'ನಿಮ್ಮ ಮುಂದಿನ ಪ್ರಾಜೆಕ್ಟ್ ಕಾಂತಾರ 2ಗೆ ಬಹಳ ಕಾತರದಿಂದ ಕಾಯುತ್ತಿದ್ದೇವೆ' ಎಂದು ಅಭಿಮಾನಿಗಳು ಕಾಮೆಂಟ್ ಮೂಲಕ ತಿಳಿಸಿದ್ದಾರೆ.