ಕರ್ನಾಟಕ

karnataka

ಬೆಂಗಳೂರಿನಲ್ಲಿ ಫಿಲ್ಮ್ ಸಿಟಿ ಸ್ಥಾಪನೆಗೆ ನಟ ರಿಷಬ್ ಶೆಟ್ಟಿ ಮನವಿ

By

Published : May 29, 2023, 9:00 AM IST

ಪ್ರಸ್ತುತ ಕಾಲಘಟ್ಟದಲ್ಲಿ ಸಿನಿಮಾ ಮೂಲಕ ಪ್ರೇಕ್ಷಕರನ್ನು ತಲುಪುವುದು ಸವಾಲಿನ ಕೆಲಸವಾಗಿದೆ ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ತಿಳಿಸಿದ್ದಾರೆ.

ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ

'ಕಾಂತಾರ' ಸಿನಿಮಾ ನಂತರ ವಿಶ್ವಾದ್ಯಂತ ಸಂಚಲನ ಮೂಡಿಸಿದ ನಟ, ನಿರ್ದೇಶಕ, ಲೇಖಕ ಹಾಗು ನಿರ್ಮಾಪಕ ರಿಷಬ್ ಶೆಟ್ಟಿ ಅವರು, ಬೆಂಗಳೂರಿನ ಫಿಲ್ಮ್ ಸಿಟಿ ಸ್ಥಾಪಿಸುವಂತೆ ಸಾರ್ವಜನಿಕ ವೇದಿಕೆಯಲ್ಲಿ ರಾಜ್ಯ ಸರ್ಕಾರಕ್ಕೆ ವಿಶೇಷ ಮನವಿ ಮಾಡಿದ್ದಾರೆ. ಭಾರತದ ಯುವ ಶಕ್ತಿಯು ರಾಷ್ಟ್ರದಾದ್ಯಂತ ಪರಿವರ್ತನೆಯ ಅಲೆಯನ್ನು ಹೇಗೆ ಹುಟ್ಟುಹಾಕುತ್ತಿದೆ ಎಂಬುದರ ಕುರಿತು ಬೆಳಕು ಚೆಲ್ಲಲು ಪ್ರಸಾರ ಮತ್ತು ಮಾಹಿತಿ ಸಚಿವಾಲಯವು ಆಯೋಜಿಸಿದ 9ನೇ ಸೇವಾ ಸುಶಾಸನ್ ಗರೀಬ್ ಕಲ್ಯಾಣ್ ರಾಷ್ಟ್ರೀಯ ಸಮಾವೇಶಕ್ಕೆ ಪ್ಯಾನಲಿಸ್ಟ್ ಆಗಿ ರಿಷಬ್ ಅವರನ್ನು ಆಹ್ವಾನಿಸಲಾಗಿತ್ತು. ಇಲ್ಲಿ ರಿಷಬ್ ಶೆಟ್ಟಿ ಅವರು ಸಿನಿಮಾ ಉದ್ಯಮಕ್ಕೆ ಸರ್ಕಾರದಿಂದ ಹೇಗೆ ಬೆಂಬಲ ಸಿಗುತ್ತಿದೆ ಎಂಬುದರ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಫಿಲ್ಮ್ ಸಿಟಿ ತೆರೆಯುವಂತೆ ವಿನಂತಿಸಿಕೊಂಡರು.

ಸಮಾವೇಶದಲ್ಲಿ ಓಯೋ ರೂಮ್ಸ್ ಸಂಸ್ಥಾಪಕ ಮತ್ತು ಸಿಇಒ ರಿತೇಶ್ ಅಗರ್ವಾಲ್, ಪಟಿಯಾಲಾ ಘರಾನಾ ಸಂಗೀತಗಾರ ಅಮಾನ್ ಅಲಿ ಬಂಗಾಶ್, ಮಾಜಿ ಭಾರತೀಯ ಹಾಕಿ ಆಟಗಾರ ಮತ್ತು ರಾಷ್ಟ್ರೀಯ ನಾಯಕ, ವೀರೇನ್ ರಸ್ಕ್ವಿನ್ಹಾ, ಸಿಎಎಕ್ಸ್‌ಪರ್ಟ್ ಸಹ-ಸಂಸ್ಥಾಪಕ ಯಶೋಧರ ಬಜೋರಿಯಾ ಮತ್ತು ಬಾಕ್ಸರ್ ಅಖಿಲ್ ಕುಮಾರ್ ಇದ್ದರು.

ದೈವ ನರ್ತಕರಿಗೆ ಮಾಸಿಕ ಭತ್ಯೆ:ಭಾರತದಾದ್ಯಂತ ಮೂರನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ಕನ್ನಡದ ಕಾಂತಾರ ಹೊರಹೊಮ್ಮಿದೆ. ಈ ಸಿನಿಮಾದ ಫಲವಾಗಿ ಹಿಂದಿನ ಬಿಜೆಪಿ ಸರ್ಕಾರವು ದೈವ ನರ್ತಕರಿಗೆ ಮಾಸಿಕ ಭತ್ಯೆಯನ್ನು ಈಗಾಗಲೇ ಘೋಷಿಸಿದೆ. ರಿಷಬ್ ಶೆಟ್ಟಿ 'ಕಾಂತಾರ 2' ಸಿನಿಮಾದಲ್ಲಿ ನಿರತರಾಗಿದ್ದಾರೆ.

ಪ್ರಧಾನಿ ಮೋದಿಗೆ ಮೆಚ್ಚುಗೆ:​ ಇನ್ನೊಂದೆಡೆ, ನವದೆಹಲಿ ನಡೆದ (ಮೇ 27-2023) ಗರೀಬ್ ಕಲ್ಯಾಣ್ ಕಾರ್ಯಕ್ರಮದಲ್ಲಿ ರಿಷಬ್​ ಶೆಟ್ಟಿ ಭಾಗವಹಿಸಿದ್ದರು. ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ್ದ ಅವರು, ನಮಗೆ ಮೋದಿಜಿಯಂತಹ ನಾಯಕ ಸಿಕ್ಕಿರುವುದು ಒಳ್ಳೆಯದು. ನಾನು ಅವರನ್ನು ಅಭಿನಂದಿಸುತ್ತೇನೆ. ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದಕ್ಕೆ ಸಂತಸವಾಗಿದೆ ಎಂದಿದ್ದರು. ಇದೇ ವೇಳೆ ಪ್ರಧಾನಿ ಮೋದಿ ಬೆಂಗಳೂರಿಗೆ ಬಂದಿದ್ದಾಗ ಭೇಟಿ ಕೊಟ್ಟಿದ್ದನ್ನು ಅವರು ನೆನಪಿಸಿಕೊಂಡಿದ್ದರು. ಮೂರ್ನಾಲ್ಕು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಮೋದಿಯವರನ್ನು ಭೇಟಿ ಮಾಡಿ ಕರ್ನಾಟಕದ ಸಿನಿಮಾ ಇಂಡಸ್ಟ್ರಿಗೆ ಏನು ಬೇಕು ಎಂಬುದರ ಬಗ್ಗೆ ಬೇಡಿಕೆ ಇಟ್ಟಿದ್ದೆವು. ಕರ್ನಾಟಕಕ್ಕೆ ಫಿಲ್ಮ್ ಸಿಟಿ ನಿರ್ಮಾಣವಾಗಬೇಕು, ಒಳ್ಳೆಯ ಥಿಯೇಟರ್‌ಗಳನ್ನು ನಿರ್ಮಿಸಬೇಕು ಎಂದು ಮನವಿ ಮಾಡಿರುವುದಾಗಿ ತಿಳಿಸಿದ್ದರು.

ನಟ ರಿಷಬ್​ ಶೆಟ್ಟಿ ಸಿನಿಮಾರಂಗದಲ್ಲಿ ಬಹಳಾ ಕ್ರಿಯಾಶೀಲರಾಗಿದ್ದಾರೆ. ಕಿರಿಕ್​ ಪಾರ್ಟಿ ನಿರ್ದೇಶನದ ಮೂಲಕ ಸಿನಿಮಾ ಲೋಕಕ್ಕೆ ಭರ್ಜರಿ ಎಂಟ್ರಿ ಪಡೆದ ಅವರು ನಂತರ ನಿರ್ಮಾಣ ಸಂಸ್ಥೆ ಕಟ್ಟಿದರು. ಇತ್ತೀಚೆಗೆ ಸಿನಿಮಾ ಪ್ರಚಾರಕ್ಕಾಗಿ ಸಂಸ್ಥೆಯನ್ನು ಕೂಡಾ ಆರಂಭಿಸಿದ್ದಾರೆ. ಕೆರಾಡಿ ಸ್ಟುಡಿಯೋಸ್​ ಎಂದು ತಮ್ಮ ಹುಟ್ಟೂರಿನ ಹೆಸರನ್ನೇ ಇಟ್ಟಿದ್ದಾರೆ. ಕಾಂತಾರ ಸಿನಿಮಾ ನಂತರ ಇದೀಗ 2 ನೇ ಭಾಗದ ಮೇಲೆ ಜನರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ:ಒಂಬತ್ತು ವರ್ಷದ ಮೋದಿ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಡಿವೈನ್​ ಸ್ಟಾರ್​.. ವಿಡಿಯೋ ನೋಡಿ

ABOUT THE AUTHOR

...view details