ರಾಜಕೀಯಕ್ಕೆ ಕಾಂತಾರ ನಟ ರಿಷಬ್ ಶೆಟ್ಟಿ ಎಂಟ್ರಿ ಕೊಡ್ತಾರಾ ಅನ್ನೋ ಚರ್ಚೆ ಇದ್ದು, ಈ ಹೊತ್ತಿನಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದಾರೆ. ಜೊತೆಗೆ ಸಿಎಂ ಬೊಮ್ಮಾಯಿ ಜೊತೆಗಿನ ಫೋಟೋ ಕೂಡ ಶೇರ್ ಮಾಡಿದ್ದಾರೆ. ಸಿಎಂ ಬೊಮ್ಮಾಯಿ ಭೇಟಿಯ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ಈ ಭೇಟಿಯ ಹಿಂದಿನ ಉದ್ದೇಶ ಸಹ ತಿಳಿಸಿದ್ದಾರೆ.
ಸಿಎಂಗೆ ಮನವಿ ಪತ್ರ ಸಲ್ಲಿಸಿದ ರಿಷಬ್ ಶೆಟ್ಟಿ: ನಟ, ನಿರ್ದೇಶಕ ರಿಷಬ್ ಶೆಟ್ಟಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಸಮಸ್ಯೆಯೊಂದರ ಬಗ್ಗೆ ಚರ್ಚೆ ನಡೆಸಿದ್ದಾರೆ. ಸಿಎಂ ಬೊಮ್ಮಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿರುವುದು ಈ ಫೋಟೋದಲ್ಲಿ ಗೊತ್ತಾಗುತ್ತದೆ. ತಮ್ಮ ಮನವಿಗೆ ಸಿಎಂ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ಕೂಡ ತಿಳಿಸಿದ್ದಾರೆ. ಅಲ್ಲದೇ ಈ ಬಗ್ಗೆ ಸ್ವತಃ ನಟ ರಿಷಬ್ ಶೆಟ್ಟಿ ಮಾತನಾಡಿರುವ ವಿಡಿಯೋ ಕೂಡ ಹಂಚಿಕೊಂಡಿದ್ದಾರೆ.
ರಿಷಬ್ ಶೆಟ್ಟಿ ಟ್ವೀಟ್: ''ಕಾಂತಾರ ಚಿತ್ರದ ನಂತರದ ದಿನಗಳಲ್ಲಿ ಕಾಡು ಸುತ್ತಿ, ಅಡವಿ ಅಂಚಿನ ಜನರ ಜೊತೆ ಮಾತನಾಡಿ, ಅರಣ್ಯ ಇಲಾಖೆ ಸಿಬ್ಬಂದಿ ಜೊತೆ ಚರ್ಚಿಸಿ ಕಲೆ ಹಾಕಿದ ಅಂಶಗಳನ್ನು ಮಾನ್ಯ ಮುಖ್ಯಮಂತ್ರಿಗಳ ಮುಂದಿಟ್ಟಾಗ ಅವರು ತಕ್ಷಣವೇ ಪರಿಹರಿಸುವುದಾಗಿ ಹೇಳಿದ್ದಾರೆ. ಸಮಸ್ಯೆಗೆ ಸ್ಪಂದಿಸಿದ ಸಿಎಂ ಬೊಮ್ಮಾಯಿ ಅವರಿಗೆ ಧನ್ಯವಾದಗಳು'' ಎಂದು ತಿಳಿಸಿದ್ದಾರೆ.
ವಿಡಿಯೋದಲ್ಲೇನಿದೆ?:ಕಾಂತಾರ ಸಿನಿಮಾ ಮಾಡುವಾಗ ಕಾಡಂಚಿನ ಜನರ ಪರಿಚಯ ಆಯಿತು. ಅರಣ್ಯಾಧಿಕಾರಿ, ಸಿಬ್ಬಂದಿ ಜೊತೆಯೂ ಬೆರೆಯಲು ಅವಕಾಶ ಸಿಕ್ಕಿತು. ಕಾಡಾನೆ ಸಮಸ್ಯೆ, ಕಾಳ್ಗಿಚ್ಚು ಸೆರಿದಂತೆ ಕೆಲ ಸಮಸ್ಯೆಗಳು ನಮ್ಮ ಅರಿವಿಗೆ ಬಂದಿತು. ಈ ಬಗ್ಗೆ 20 ಅಂಶಗಳುಳ್ಳ ಮನವಿ ಪತ್ರವನ್ನು ಸಿಎಂ ಬೊಮ್ಮಾಯಿ ಅವರಿಗೆ ಸಲ್ಲಿಸಿದ್ದೇವೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ, ಇಂತಹ ಮುಖ್ಯಮಂತ್ರಿ ಪಡೆದ ನಾವು ಧನ್ಯ ಎಂದು ರಿಷಬ್ ಶೆಟ್ಟಿ ತಿಳಿಸಿದ್ದಾರೆ.