ವಿಶ್ವ ಪ್ರತಿಷ್ಟಿತ ಪ್ರಶಸ್ತಿ ಪುರಸ್ಕಾರ - ಆಸ್ಕರ್ 2023ರಲ್ಲಿ ನಮ್ಮ ಭಾರತದ ಮನೋರಂಜನಾ ಕ್ಷೇತ್ರ ಅಭೂತಪೂರ್ವ ಯಶಸ್ಸು ಕಂಡಿದ್ದು, ಎಲ್ಲೆಡೆ ಸಂತಸದ ವಾತಾವರಣವಿದೆ. ಭಾರತದ ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಸಾರಥ್ಯದಲ್ಲಿ ಮೂಡಿಬಂದ ಆರ್‌ಆರ್‌ಆರ್ ಸಿನಿಮಾದ ಸೂಪರ್ ಹಿಟ್ ನಾಟು ನಾಟು ಹಾಡು ಅಕಾಡೆಮಿಯ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ಹಾಗೆಯೇ, ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶನದ, ಗುನೀತ್ ಮೊಂಗಾ ನಿರ್ಮಾಣದ "ದ ಎಲಿಫೆಂಟ್ ವಿಸ್ಪರರ್ಸ್" ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ ಪ್ರಶಸ್ತಿ ಪಡೆದುಕೊಂಡು ಭಾರತದ ಖ್ಯಾತಿ ಹೆಚ್ಚಿಸಿದೆ. ಈ ಹಿನ್ನೆಲೆ ಅಭಿಮಾನಿಗಳು ಸೇರಿದಂತೆ ಅನೇಕ ಗಣ್ಯರು ವಿಜೇತರನ್ನು ಕೊಂಡಾಡಿದ್ದಾರೆ.
ಆಸ್ಕರ್ ಪ್ರಶಸ್ತಿ ವಿಜೇತ ನಾಟು ನಾಟು ಹಾಡಿನ ಸಂಯೋಜಕ ಎಂಎಂ ಕೀರವಾಣಿ ಮತ್ತು ಗೀತೆ ರಚನೆಕಾರ ಚಂದ್ರಬೋಸ್ ಪರವಾಗಿ ತಾರೆಯರು ವಿಶೇಷ ಒಲವು ತೋರುತ್ತಿದ್ದಾರೆ. ಅತ್ಯುತ್ತಮ ಮೂಲ ಗೀತೆಗಾಗಿ ನಾಟು ನಾಟು ಆಸ್ಕರ್ ಪ್ರಶಸ್ತಿ ಗೆದ್ದ ನಂತರ, ಅಮೆರಿಕನ್ ಖ್ಯಾತ ಗಾಯಕ, ಗೀತೆ ರಚನೆಕಾರ, ಪಿಯಾನೋ ವಾದಕ ರಿಚರ್ಡ್ ಕಾರ್ಪೆಂಟರ್ (Richard Carpenter) ಅವರು ನಾಟು ನಾಟು ಸಂಗೀತ ಸಂಯೋಜಕ ಎಂಎಂ ಕೀರವಾಣಿ ಮತ್ತು ಗೀತೆ ರಚನೆಕಾರ ಚಂದ್ರಬೋಸ್ ಅವರ ಆಸ್ಕರ್ ಗೆಲುವನ್ನು ಕೊಂಡಾಡಿ, ಅವರಿಗೆ ವಿಶೇಷ ಸಂಗೀತ ಅರ್ಪಿಸಿದರು. ಆಸ್ಕರ್ ವೇದಿಕೆಯಲ್ಲಿ ಪ್ರಶಸ್ತಿ ವಿಜೇತರು ರಿಚರ್ಡ್ ಕಾರ್ಪೆಂಟರ್ ಅವರ ಹೆಸರನ್ನು ಉಲ್ಲೇಖಿಸಿದ್ದರು.
ರಿಚರ್ಡ್ ಕಾರ್ಪೆಂಟರ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ರಿಚರ್ಡ್ ಕಾರ್ಪೆಂಟರ್ ಪಿಯಾನೋ ನುಡಿಸಿದ್ದರೆ, ಅವರ ಮಕ್ಕಳಾದ Mindy (ಮೈಂಡಿ) ಮತ್ತು ಟ್ರೇಸಿ (Tracy) ಟಾಪ್ ಆಫ್ ದಿ ವರ್ಲ್ಡ್ ಹಾಡನ್ನು ಹಾಡಿದ್ದಾರೆ. ಟಾಪ್ ಆಫ್ ದಿ ವರ್ಲ್ಡ್ ರಿಚರ್ಡ್ ಕಾರ್ಪೆಂಟರ್ ಅವರ ಹಾಡು. ನಿಮ್ಮ ಗೆಲುವಿನಿಂದ ನಾವೆಷ್ಟು ಹೆಮ್ಮೆ ಪಡುತ್ತಿದ್ದೇವೆ ಎಂಬುದನ್ನು ನೀವು ಅರಿತುಕೊಳ್ಳುತ್ತೀರಿ ಎಂದು ನಾವು ಭಾವಿಸುತ್ತೇವೆ ಎಂದು ಅಮೆರಿಕನ್ ಗಾಯಕ ತಮ್ಮ ಪೋಸ್ಟ್ನಲ್ಲಿ ಬರೆದಿದ್ದಾರೆ. ಜೊತೆಗೆ, ನೀವು ಎಷ್ಟು ಶ್ರೇಷ್ಠರು ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಇನ್ಸ್ಟಾ ಪೋಸ್ಟ್ ನಿಮಗೆ ಸಹಾಯ ಮಾಡಿದೆ ಎಂದು ನಾವು ಭಾವಿಸುತ್ತೇವೆ ಎಂದು ಕೂಡಾ ತಿಳಿಸಿದ್ದಾರೆ.
ರಿಚರ್ಡ್ ಕಾರ್ಪೆಂಟರ್ ಅವರು ಅತ್ಯುತ್ತಮ ಮೂಲ ಗೀತೆಗಾಗಿ ಆಸ್ಕರ್ ಪ್ರಶಸ್ತಿ ಗೆದ್ದ ಎಂಎಂ ಕೀರವಾಣಿ ಮತ್ತು ಚಂದ್ರಬೋಸ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಲು ಈ ವಿಶೇಷ ವಿಡಿಯೋವನ್ನು ಶೇರ್ ಮಾಡಿದ್ದಾರೆ. ನಾನು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ನಮ್ಮ ಕುಟುಂಬದಿಂದ ಈ ಮೂಲಕ ಅಭಿನಂದನೆ ಸಲ್ಲಿಸುತ್ತಿದ್ದೇವೆ ಕಳುಹಿಸುತ್ತಿದ್ದೇನೆ ಎಂದು ತಿಳಿಸಿದರು.