ಅದು 2020ರ ಜೂನ್ ತಿಂಗಳು. ಕೋವಿಡ್ ಮೊದಲ ಅಲೆ ಉತ್ತುಂಗದಲ್ಲಿದ್ದ ಸಮಯ. ಇದೇ ಸಂದರ್ಭದಲ್ಲಿ ಬಾಲಿವುಡ್‌ನ ಹೆಸರಾಂತ ಯುವ ನಟ ಸುಶಾಂತ್ ಸಿಂಗ್ ರಜ್ಪೂತ್ ಆತ್ಮಹತ್ಯೆಗೆ ಶರಣಾಗಿದ್ದರು. ಈ ಪ್ರಕರಣದಲ್ಲಿ ಅವರ ಆತ್ಮೀಯ ಗೆಳತಿ ರಿಯಾ ಚಕ್ರವರ್ತಿ ಕೇಂದ್ರಬಿಂದುವಾಗಿ ಗುರುತಿಸಿಕೊಂಡಿದ್ದರು. ಹೀಗಾಗಿ ನಟಿ ಸಾಕಷ್ಟು ಟೀಕೆ, ಆರೋಪ ಎದುರಿಸುವಂತಾಗಿತ್ತು. ಸುಶಾಂತ್‌ಗೆ ಡ್ರಗ್ಸ್ ಪೂರೈಸಿದ ಆರೋಪದಡಿ ಆರು ವಾರಗಳ ಜೈಲು ಶಿಕ್ಷೆಯನ್ನೂ ಇವರು ಎದುರಿಸಿದ್ದರು. ಇದೀಗ ಸಂದರ್ಶನವೊಂದರಲ್ಲಿ, ಸುಶಾಂತ್ ಮಾನಸಿಕ ಅನಾರೋಗ್ಯದ ಕುರಿತು ಮಾತನಾಡಿದ್ದಾರೆ.
"ನಮ್ಮ ದೇಶದಲ್ಲಿ ಮಾನಸಿಕ ಆರೋಗ್ಯ ಅಥವಾ ಅನಾರೋಗ್ಯದ ಕುರಿತು ತಪ್ಪಾಗಿ ಕಲ್ಪನೆ ಇದೆ. ಈ ವಿಚಾರದಲ್ಲಿ ಭಾರತ ಇನ್ನೂ ಹೆಣಗಾಡುತ್ತಿದೆ. ಹೆಸರಾಂತ ವ್ಯಕ್ತಿಗಿದು ಪರಿಣಾಮ ಬೀರಿದಾಗ ಸಾಮಾನ್ಯವಾಗಿ ಜನರು, 'ಖ್ಯಾತಿ, ಯಶಸ್ಸು, ಐಶ್ವರ್ಯ ಹೊಂದಿರುವವರೇಕೆ ಖಿನ್ನತೆಗೆ ಒಳಗಾಗುತ್ತಾರೆ?' ಎಂದೆಲ್ಲಾ ಪ್ರಶ್ನಿಸುತ್ತಾರೆ. ಮಾನಸಿಕ ಅನಾರೋಗ್ಯದ ವಿಶ್ಲೇಷಣೆಯನ್ನು ತಪ್ಪಾಗಿ ಗ್ರಹಿಸಲಾಗುತ್ತಿದೆ'' ಎಂದು ತಿಳಿಸಿದರು.
ಖ್ಯಾತಿ, ಸಂಪತ್ತಿನ ಕುರಿತಾದ ಸಮಾಜದ ಇಂಥ ಕಲ್ಪನೆಯಿಂದಾಗಿ ಈ ರೀತಿಯ ಗ್ರಹಿಕೆಗಳು ಹುಟ್ಟಿಕೊಳ್ಳುತ್ತವೆ. ಎಲ್ಲವನ್ನೂ ಹೊಂದಿರುವ ಅದೆಷ್ಟೋ ಜನರು ಮಾನಸಿಕ ಆರೋಗ್ಯದ ಸವಾಲುಗಳನ್ನು ಎದುರಿಸುತ್ತಿರುತ್ತಾರೆ. ಅದು ಅವರ ಸ್ವಂತ ಆಲೋಚನೆಗಳನ್ನು ಇತರರ ಬಳಿ ಪ್ರಶ್ನಿಸುವಂತೆ ಪ್ರೇರೇಪಿಸುತ್ತದೆ. ಇದೇ ಅಸ್ತವ್ಯಸ್ತಗೊಂಡ ಮನಸ್ಥಿತಿ ಎಂದು ನಟಿ ಒತ್ತಿ ಹೇಳಿದರು. ಮಾನಸಿಕ ಆರೋಗ್ಯದ ಬಗ್ಗೆ ತಿಳಿದುಕೊಳ್ಳುವಲ್ಲಿ ಸಮಾಜ ನಿಧಾನವಾಗಿ ವಿಕಸನಗೊಳ್ಳುತ್ತಿದೆ. ಆದರೆ ಶ್ರೀಮಂತ, ಪ್ರಸಿದ್ಧ ಅಥವಾ ಸಾಧನೆಗೈದ ವ್ಯಕ್ತಿಗಳು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂಬುದನ್ನು ಒಪ್ಪಿಕೊಳ್ಳುವುದು ಅನೇಕರಿಗೆ ಸವಾಲು. ಎಲ್ಲವನ್ನೂ ಹೊಂದಿರುವವರು ಕೂಡ ಇಂತಹ ಸಮಸ್ಯೆಗಳಿಂದ ಹೊರತಲ್ಲ ಎಂದು ನಟಿ ಹೇಳಿದರು.