ನಟಿ ಲಾರಾ ದತ್ತಾ ಅವರ ಜೀವನದಲ್ಲಿ 2020ರ ಮೇ 12, ವಿಶೇಷ ಸ್ಥಾನವನ್ನು ಪಡೆದಿದೆ. ಆ ದಿನ ಅವರು 'ಭುವನ ಸುಂದರಿ' ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಭಾರತೀಯರನ್ನು ಹೆಮ್ಮೆ ಪಡುವಂತೆ ಮಾಡಿದರು. 1994 ರಲ್ಲಿ ಈ ಕಿರೀಟವನ್ನು ಪಡೆದಿದ್ದ ಸುಶ್ಮಿತಾ ಸೇನ್ ಅವರ ನಂತರ ಅಂದರೆ, ಆರು ವರ್ಷಗಳ ಬಳಿಕ ಲಾರಾ ಈ ಕಿರೀಟವನ್ನು ಮುಡಿಗೇರಿಸಿಕೊಂಡರು. ಆಗ ಅವರಿಗೆ ಕೇವಲ 22 ವರ್ಷ ವಯಸ್ಸಾಗಿತ್ತು. ಅಂದಿನಿಂದ ಅವರು ತಮ್ಮ ಸೌಂದರ್ಯ, ವರ್ಚಸ್ಸು ಮತ್ತು ಬಹುಮುಖ ಪ್ರತಿಭೆಗಳಿಂದ ಅದೆಷ್ಟೋ ಹೃದಯಗಳನ್ನು ಗೆದ್ದಿದ್ದಾರೆ.
2000 ನೇ ಇಸವಿಯಲ್ಲಿ ನಡೆದ ಸೌಂದರ್ಯ ಸ್ಪರ್ಧೆ ವಿರುದ್ಧ ಜನರಿಂದ ಆಕ್ಷೇಪ ವ್ಯಕ್ತವಾಗಿತ್ತು. ಮಹಿಳೆಯರನ್ನು ಪ್ರದರ್ಶನಕ್ಕೆ ಇಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಜೊತೆಗೆ ಇದರ ವಿರುದ್ಧ ಜನರು ಪ್ರತಿಭಟನೆ ಕೂಡ ನಡೆಸಿದ್ದರು. ಇದೇ ವೇಳೆ, ಲಾರಾ ದತ್ತಾ ಅವರಿಗೆ ಫೈನಲ್ ಸ್ಪರ್ಧೆಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಜನರನ್ನು ನೀವು ಹೇಗೆ ಮನವೊಲಿಸುತ್ತೀರಿ? ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಇದಕ್ಕೆ ಲಾರಾ ಅವರು ನೀಡಿದ ಉತ್ತರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದು ವೇದಿಕೆಯ ಮೇಲೆ ನಟಿಯ ಸೌಂದರ್ಯದ ಜೊತೆಗೆ ಅವರ ಬುದ್ಧಿವಂತಿಕೆಯು ಅನಾವರಣಗೊಂಡಿತ್ತು.
"ಮಿಸ್ ಯೂನಿವರ್ಸ್ನಂತಹ ಸ್ಪರ್ಧೆಗಳು ಮಹಿಳೆಯರಿಗೆ ಅವರು ಬಯಸುವಂತಹ ಕ್ಷೇತ್ರಗಳಲ್ಲಿ ಮುನ್ನುಗ್ಗಲು ಉತ್ತಮ ವೇದಿಕೆ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ. ಅದು ಉದ್ಯಮದಲ್ಲಾಗಿರಲಿ, ಸೇನೆಯಲ್ಲಾಗಿರಲಿ ಅಥವಾ ರಾಜಕೀಯವಾಗಿರಲಿ. ಇದು ನಮ್ಮ ಆಯ್ಕೆಗಳಿಗೆ ಧ್ವನಿಯಾಗಲು ಈ ವೇದಿಕೆ ಸಹಾಯ ಮಾಡುತ್ತದೆ. ಜೊತೆಗೆ ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮತ್ತು ಸ್ವತಂತ್ರವಾಗಿರಲು ಸಹಕಾರಿಯಾಗುತ್ತದೆ" ಎಂದು ಲಾರಾ ವಿಶ್ವಾಸದಿಂದ ಉತ್ತರಿಸಿದರು. ಇದು ತೀರ್ಪುಗಾರರನ್ನು ಮೆಚ್ಚಿಸುವಲ್ಲಿ ಯಶಸ್ವಿಯಾಯಿತು.