ಬಹುನಿರೀಕ್ಷಿತ ಕಬ್ಜ ಸಿನಿಮಾ ಬಗ್ಗೆ ಕ್ರಿಯೇಟ್ ಆಗಿರೋ ಕ್ರೇಜ್ ಅಷ್ಟಿಷ್ಟಲ್ಲ. ಇಷ್ಟೊಂದು ಕುತೂಹಲ ಮೂಡಿದ್ದು ಸುಮ್ಮನೆಯಲ್ಲ. ಅದರ ಹಿಂದೆ ನಿರ್ದೇಶಕ ಆರ್ ಚಂದ್ರು ಅವರ ಕಠಿಣ ಪರಿಶ್ರಮವಿದೆ. ಜೊತೆಗೆ ಹಗಲು ರಾತ್ರಿ ಎನ್ನದೇ ಕಷ್ಟಪಟ್ಟು ಕೆಲಸ ಮಾಡಿದ ದೊಡ್ಡ ತಂಡವೇ ಇದೆ. ರೆಟ್ರೋ ಕಾಲದ ಕಥೆಯನ್ನು ತೆರೆಗೆ ತರೋದು ಅಂದ್ರೆ ನಿಜಕ್ಕೂ ಅದು ಸುಲಭದ ಕೆಲಸವಲ್ಲ. ಆ ಕಾಲದ ರೀತಿ ಕಾಣೋಕೆ ಪ್ರಾಪರ್ಟೀಸ್ಗಳು ಬೇಕು. ಅದನ್ನೆಲ್ಲ ಹೊಂದಿಸುವಲ್ಲಿ ಆರ್ ಚಂದ್ರು ಟೀಮ್ ಸಿಕ್ಕಾಪಟ್ಟೆ ಎಫರ್ಟ್ ಹಾಕಿದೆ. ಅದಕ್ಕೆ ಸಾಕ್ಷಿಯೇ ಈ ಸಿನಿಮಾದಲ್ಲಿನ ಕಾರುಗಳ ಕಲೆಕ್ಷನ್.
'ಕಬ್ಜ' ಅಂದ್ರೆ ಬರೀ ಸಿನಿಮಾ ಅಲ್ಲ. ಅದು ನಿರ್ದೇಶಕ ಹಾಗೂ ನಿರ್ಮಾಪಕ ಆರ್ ಚಂದ್ರು ಅವರ ಬಹುದೊಡ್ಡ ಕನಸು. ಅದನ್ನು ನನಸಾಗಿಸೋಕೆ ಕೋಟಿ ಕೋಟಿ ಹಣ ಸುರಿಸಿದ್ದಾರೆ. ಕ್ವಾಲಿಟಿಯಲ್ಲಿ ಕಾಂಪ್ರಮೈಸ್ ಆಗುವ ಮಾತೇ ಇಲ್ಲ ಎಂಬುದು ಚಂದ್ರು ಅವರ ಪಾಲಿಸಿ. ಇದು ನಿಜವೆಂಬುದಕ್ಕೆ ಕಬ್ಜ ಸಿನಿಮಾದಲ್ಲಿ ಕಾಣಿಸುವ ಕಾರುಗಳೇ ಸಾಕ್ಷಿ. ಇದನ್ನು ನೋಡಿದ್ರೇನೇ ತಿಳಿಯುತ್ತೆ ನಿರ್ದೇಶಕರ ವಿಷನ್ ಎಂಥದ್ದು ಅಂತ.
ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್, ಶ್ರೀಯಾ ಶರಣ್ ಅವರ ಅಭಿಮಾನಿಗಳಿಗೆ ‘ಕಬ್ಜ’ ಸಿನಿಮಾ ಎಂದರೆ ಮನರಂಜನೆಯ ಹಬ್ಬ. ಪಾತ್ರಗಳ ರೀತಿಯೇ ಈ ಸಿನಿಮಾದಲ್ಲಿ ಆ ಕಾಲದ ಕಾರುಗಳು, ಬೈಕ್ಗಳು, ಲಾರಿಗಳು ಗಮನ ಸೆಳೆಯಲಿವೆ. ಈಗಾಗಲೇ ಟ್ರೇಲರ್ನಲ್ಲಿ ಅವುಗಳ ಝಲಕ್ ಕಾಣಿಸಿಕೊಂಡಿವೆ. ಮಿರಮಿರ ಮಿಂಚುವ ಕಾರುಗಳು ಹೈಲೈಟ್ ಆಗಿವೆ.
ಕಬ್ಜ ಶೂಟಿಂಗ್ಗಾಗಿ ಕಲಾ ಫಾರ್ಮ್ನಿಂದ 30 ವಿಂಟೇಜ್ ಕಾರುಗಳನ್ನು ತರಿಸಲಾಗಿತ್ತು. ಬೇರೆ ಬೇರೆ ಕಡೆಗಳಿಂದ 30 ಲಾರಿಗಳನ್ನು ತರಿಸಿ ಶೂಟಿಂಗ್ ಮಾಡಲಾಗಿದೆ. ಬರೋಬ್ಬರಿ 300 ಬೈಕ್ಗಳು ಬಳಕೆ ಆಗಿವೆ. 70 ಜೀಪುಗಳು ಕೂಡ ಅಬ್ಬರಿಸುತ್ತಿವೆ. ಈ ಕಾರು ಹಾಗೂ ಬೈಕ್ಗಳಿಗಾಗಿ ಕಮ್ಮಿ ಅಂದ್ರು 10 ರಿಂದ 15 ಕೋಟಿ ಖರ್ಚು ಮಾಡಲಾಗಿದೆಯಂತೆ. 1945ರ ಕಾಲದ ಸೀನ್ಗಳನ್ನು ತೆರೆ ಮೇಲೆ ಮೂಡಿಸೋಕೆ ಕಬ್ಜ ತಂಡ ಇಷ್ಟೆಲ್ಲ ಕಷ್ಟಪಟ್ಟಿದೆ. ಒಟ್ಟಿನಲ್ಲಿ ಸಿನಿಮಾ ನೋಡೋರಿಗೆ ರೆಟ್ರೋ ಜಮಾನದ ಫೀಲ್ ಆಗಬೇಕು. ನೋಡಿದವರೆಲ್ಲ ವಾವ್ ಅನ್ನಲೇಬೇಕು ಎನ್ನುವಂತಹ ಗುರಿ ಇಟ್ಕೊಂಡು ಮಾಡಿದ ಪ್ರಯತ್ನವೆಲ್ಲವೂ ತೆರೆ ಮೇಲೆ ಕಾಣಿಸುತ್ತಿದೆ.