ಸೌತ್ ಸೂಪರ್ಸ್ಟಾರ್ ವಿಜಯ್ ಹಾಗೂ ಸ್ಟಾರ್ ಡೈರೆಕ್ಟರ್ ಲೋಕೇಶ್ ಕನಗರಾಜ್ ಕಾಂಬೋದ ಮುಂಬರುವ ಬಹುನಿರೀಕ್ಷಿತ ಚಿತ್ರ 'ಲಿಯೋ'. ಚಿತ್ರದ ಆಡಿಯೋ ರಿಲೀಸ್ ಈವೆಂಟ್ ಅನ್ನು ಪಾಸ್ಗಾಗಿ ಬಂದ ವಿನಂತಿಗಳು ಹಾಗೂ ಸುರಕ್ಷತೆಯ ಕುರಿತಾದ ಆತಂಕಗಳ ಕಾರಣದಿಂದ ರದ್ದುಗೊಳಿಸಲಾಗಿದೆ. ಈವೆಂಟ್ ಅನ್ನು ಲಿಯೋ ಸಿನಿಮಾ ನಿರ್ಮಾಣ ಮಾಡುತ್ತಿರುವ ಸವೆನ್ ಸ್ಕ್ರೀನ್ ಸ್ಟುಡಿಯೋ ರದ್ಧುಗೊಳಿಸಿದ್ದು, ಈ ನಿರ್ಧಾರ ರಾಜಕೀಯ ಒತ್ತಡ ಅಥವಾ ಇತರೆ ಯಾವುದೇ ಅಂಶಗಳಿಂದ ಪ್ರಭಾವಿತವಾಗಿಲ್ಲ ಎಂದು ನಿರ್ಮಾಪಕರು ಸ್ಪಷ್ಟನೆ ಕೊಟ್ಟಿದ್ದಾರೆ.
ಇತ್ತೀಚೆಗೆ ಪಣಿಯೂರಿನಲ್ಲಿ ನಡೆದ ಎಆರ್ ರೆಹಮಾನ್ ಅವರ ಮ್ಯೂಸಿಕ್ ಈವೆಂಟ್ನಲ್ಲಿ ಜನಸಂದಣಿ ಹೆಚ್ಚಾಗಿ ನೂಕುನುಗ್ಗಲಿನ ಪರಿಸ್ಥಿತಿಗೆ ಕಾರಣವಾದ ಘಟನೆಯನ್ನು ಗಮನದಲ್ಲಿಟ್ಟುಕೊಂಡ ಚಿತ್ರತಂಡ ಲಿಯೋ ಆಡಿಯೋ ರಿಲೀಸ್ ಈವೆಂಟ್ ಅನ್ನು ರದ್ದುಗೊಳಿಸಿದೆ. ಅಭಿಮಾನಿಗಳ ಸುರಕ್ಷತೆಯ ನಿಟ್ಟಿನಲ್ಲಿ ಹಾಗೂ ಇಂತಹ ಅವಘಡಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಲಿಯೋ ನಿರ್ಮಾಪಕರು ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ನಡೆಸದಿರಲು ನಿರ್ಧರಿಸಿದ್ದಾರೆ. ಈ ಮೊದಲು ಸೆ. 30ಕ್ಕೆ ಕಾರ್ಯಕ್ರಮ ನಡೆಸಲು ನಿರ್ಧಾರ ಕೈಗೊಳ್ಳಲಾಗಿತ್ತು.
ಸಾಮಾಜಿಕ ಮಾಧ್ಯಮದಲ್ಲಿ ಈ ನಿರ್ಧಾರಕ್ಕೆ ಕಾರಣ ಬಹಿರಂಗಪಡಿಸಿರುವ ಸವೆನ್ ಸ್ಕ್ರೀನ್ ಸ್ಟುಡಿಯೋ ಸಂಸ್ಥೆ, "ಈವೆಂಟ್ನ ಪಾಸ್‌ಗಳಿಗಾಗಿ ಬೇಡಿಕೆ ಹೆಚ್ಚುತ್ತಿದೆ ಮತ್ತು ಜನರ ಸುರಕ್ಷತೆಯನ್ನು ಪರಿಗಣಿಸಿ, ನಾವು ಲಿಯೋ ಆಡಿಯೋ ಲಾಂಚ್ ಈವೆಂಟ್ ಅನ್ನು ನಡೆಸದಿರಲು ನಿರ್ಧರಿಸಿದ್ದೇವೆ. ಅಭಿಮಾನಿಗಳ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು, ನಾವು ಆಗಾಗ್ಗೆ ಸಿನಿಮಾದ ಅಪ್ಡೇಟ್ಸ್ ಕೊಡಲಿದ್ದೇವೆ. ಹಲವರು ಊಹಿಸಿದಂತೆ ರಾಜಕೀಯ ಒತ್ತಡ ಅಥವಾ ಇನ್ಯಾವುದೋ ಕಾರಣಗಳಿಂದ ಈ ನಿರ್ಧಾರ ಕೈಗೊಂಡಿಲ್ಲ'' ಎಂದು ಸ್ಪಷ್ಟಪಡಿಸಿದ್ದಾರೆ.
ಎಜಿಎಸ್ ಸಿನಿಮಾಸ್ನ ಸಿಇಒ ಅರ್ಚನಾ ಕಲಪತಿ ಅವರು ಚಿತ್ರತಂಡದ ಈ ನಿರ್ಧಾರವನ್ನು ಶ್ಲಾಘಿಸಿ, ತಮ್ಮ ಬೆಂಬಲವನ್ನೂ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳ ಸುರಕ್ಷತೆಗೆ ಆದ್ಯತೆ ನೀಡುವುದರ ಪ್ರಾಮುಖ್ಯತೆಯನ್ನೂ ಒತ್ತಿಹೇಳಿದರು. ಈವೆಂಟ್ ಕ್ಯಾನ್ಸಲ್ ಮಾಡಿದ್ದರೂ, ಲಿಯೋ ಸಿನಿಮಾ ಚಿತ್ರಮಂದಿರಗಳಲ್ಲಿ ಅತ್ಯುತ್ತಮ ಆರಂಭ (ಕಲೆಕ್ಷನ್) ಹೊಂದಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜಕೀಯ ಒತ್ತಡವು ರದ್ಧತಿಗೆ ಒಂದು ಕಾರಣ ಆಗಿರಬಹುದು ಎಂದು ವಿಜಯ್ ಅಭಿಮಾನಿಗಳು ಊಹಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹೀಗೊಂದು ಗುಸುಗುಸು. ಆದಾಗ್ಯೂ ಚಿತ್ರ ನಿರ್ಮಾಪಕರು ಈ ಊಹಾಪೋಹಗಳನ್ನು ನಿರಾಕರಿಸಿದ್ದಾರೆ.