ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ 'ಯುಐ' ಸಿನಿಮಾ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಜೊತೆಗೆ ಅವರ ನಿರ್ದೇಶನಕ್ಕೂ ದೊಡ್ಡ ಮಟ್ಟದ ಅಭಿಮಾನಿಗಳಿದ್ದಾರೆ. ಈ ಮಾತು ಈಗಲ್ಲ, ಹಿಂದಿನಿಂದಲೂ ಸಿನಿ ಪ್ರಿಯರು ಪ್ರೂವ್ ಮಾಡುತ್ತಲೇ ಬಂದಿದ್ದಾರೆ. ಇದುವರೆಗೆ ಉಪ್ಪಿ ಆ್ಯಕ್ಷನ್ ಕಟ್ ಹೇಳಿರುವ ಚಿತ್ರಗಳು ಸೋತಿರೋದೇ ವಿರಳ. ಇದೀಗ, ಉಪ್ಪಿ 2 ಸಿನಿಮಾದ ಬಳಿಕ ಎಂಟು ವರ್ಷಗಳಾದ ಮೇಲೆ ರಿಯಲ್ ಸ್ಟಾರ್ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟು ಅಖಾಡಕ್ಕೆ ಇಳಿದಿದ್ದಾರೆ. 'ಯುಐ' ಎಂಬ ಹೆಸರಿನಿಂದ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ.
ಅದ್ಧೂರಿಯಾಗಿ ಸೆಟ್ಟೇರಿದ 'ಯುಐ' ಸಿನಿಮಾ, ಸೈಲೆಂಟ್ ಆಗಿ ಚಿತ್ರೀಕರಣ ಮುಗಿಸಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಇದೀಗ ಸಿನಿಮಾದಿಂದ ವಿಡಿಯೋವೊಂದು ಹೊರಬಿದ್ದಿದೆ. 'ಯುಐ' ಚಿತ್ರದ ಫಸ್ಟ್ ಲುಕ್ ಅಥವಾ ಟೀಸರ್ ಬಿಡುಗಡೆಗೊಳಿಸುವ ಬದಲು ನಿರ್ಮಾಪಕರಾದ ಕೆ ಪಿ ಶ್ರೀಕಾಂತ್ ಮತ್ತು ನವೀನ್ ಜೊತೆ ಉಪೇಂದ್ರ ಮಾತನಾಡುತ್ತಿರುವ ದೃಶ್ಯ ಇದಾಗಿದೆ. ರಿಯಲ್ ಸ್ಟಾರ್ ಯುಐ ಸಿನಿಮಾದ ಪ್ರಮೋಷನ್ ಮಾಡಲ್ಲ ಎಂದು ನಿರ್ಮಾಪಕರಲ್ಲಿ ಹೇಳುತ್ತಿದ್ದಾರೆ.
ವಿಡಿಯೋದಲ್ಲೇನಿದೆ?: ಮೊದಲಿಗೆ ಉಪೇಂದ್ರ ಅವರನ್ನು ಭೇಟಿಯಾಗಲು ನಿರ್ಮಾಪಕರಾದ ಕೆ ಪಿ ಶ್ರೀಕಾಂತ್ ಮತ್ತು ನವೀನ್ ಬರುತ್ತಾರೆ. ಸಿನಿಮಾ ಸ್ಟಾರ್ಟ್ ಆಗಿ ಒಂದೂವರೆ ವರ್ಷ ಆಗ್ತಾ ಬಂತು. ಯುಐ ಸಿನಿಮಾವನ್ನು ಪ್ರಮೋಷನ್ ಮಾಡುವುದಕ್ಕೆ ಒಂದು ಪೋಸ್ಟರ್ ಅಥವಾ ಟೀಸರ್ ಕೂಡ ಬಿಡುಗಡೆ ಮಾಡಿಲ್ಲ ಎಂದು ಅವರಿಬ್ಬರು ಉಪ್ಪಿಯನ್ನು ಕೇಳುತ್ತಾರೆ. ಅದಕ್ಕೆ ರಿಯಲ್ ಸ್ಟಾರ್, ಯಾಕೆ? ಫಸ್ಟ್ ಲುಕ್ ಟೀಸರ್ ಅನ್ನು ಬಿಡಲೇಬೇಕಾ? ಎಂದು ನಿರ್ಮಾಪಕರಿಗೆ ಪ್ರಶ್ನಿಸುತ್ತಾರೆ.
ಮತ್ತೆ ನಮ್ಮ ಸಿನಿಮಾಗೆ ಹೇಗೆ ಸಾರ್ ಜನರಿಗೆ ರೀಚ್ ಆಗುತ್ತದೆ? ರಿಲೀಸ್ ಡೇಟ್ ಯಾವಾಗ ಅಂತ ಹೇಗೆ ಗೊತ್ತಾಗುತ್ತೆ? ನಮ್ಮ ಸಿನಿಮಾದ ಇಡೀ ಕಥೆಯನ್ನು ಒಂದು ನಿಮಿಷದ ವಿಡಿಯೋದಲ್ಲಿ ತೋರಿಸಬೇಕು ಅಲ್ವಾ ಸರ್? ಎಂದು ನಿರ್ಮಾಪಕರು ಉಪ್ಪಿಗೆ ಕೇಳುತ್ತಾರೆ. ಸಿನಿಮಾಗೆ ಹೈಪ್ ಬರಬೇಕು ಅಂದ್ರೆ ಟೀಸರ್, ಪೋಸ್ಟರ್ ಯಾಕೆ? ಸುಳ್ಳಿಗೆ ಹೈಪ್ ಮಾಡಬೇಕು. ಆದರೆ ಸತ್ಯಕ್ಕೆ ತಾನಾಗಿಯೇ ಹೈಪ್ ಸಿಗುತ್ತದೆ ಎಂದು ಪಂಚಿಂಗ್ ಡೈಲಾಗ್ ಹೇಳುವ ಮೂಲಕ ಉಪ್ಪಿ ರಾಕ್ ಆದ್ರೆ, ನಿರ್ಮಾಪಕರು ಶಾಕ್ ಆಗುತ್ತಾರೆ. ಹೊಸ ರೀತಿಯಲ್ಲೇ ಚಿತ್ರತಂಡ 'ಯುಐ' ಸಿನಿಮಾ ಪ್ರಮೋಷನ್ ಮಾಡುತ್ತಿದೆ.
ಸದ್ಯ ಯುಐ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಎಡಿಟಿಂಗ್ ಕೆಲಸ ನಡೆಯುತ್ತಿದೆ. ಉಪೇಂದ್ರ ಈ ಚಿತ್ರದಲ್ಲಿ 3ಡಿ ಬಾಡಿ ಸ್ಕ್ಯಾನ್ ಅನ್ನು ಬಳಸಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಕ್ಯಾಮರಾಗಳನ್ನು ಬಳಸಿ ಶೂಟ್ ಮಾಡಲಾಗಿದ್ದು, ಈ ತಂತ್ರಜ್ಞಾನ ಬಳಸಿದ್ದು ಏಷ್ಯಾದಲ್ಲಿಯೇ ಮೊದಲ ಸಿನಿಮಾ ಎನ್ನಲಾಗಿದೆ. ಈ ತಂತ್ರಜ್ಞಾನವನ್ನು ಜೇಮ್ಸ್ ಕ್ಯಾಮರಾನ್ 'ಅವತಾರ್ 2' ಸಿನಿಮಾಗೆ ಬಳಸಲಾಗಿತ್ತು. ಇಷ್ಟೇ ಅಲ್ಲದೇ ಸುಮಾರು 14 ಸಾವಿರ ವಿಎಫ್ಎಕ್ಸ್ ಶಾಟ್ಸ್ ಅನ್ನು ಬಳಸಲಾಗಿದೆ. ಹಿಂದೆಂದೂ ಕನ್ನಡದಲ್ಲಿ ಈ ಟೆಕ್ನಾಲಜಿ ಬಳಸಿಲ್ಲ ಅನ್ನೋದು ಗಮನಾರ್ಹ.
ಇನ್ನು ಉಪ್ಪಿ ನಿರ್ದೇಶಿಸಿದ ಈವರೆಗಿನ ಸಿನಿಮಾಗಳಲ್ಲಿ ಇದು ದುಬಾರಿ ಎನ್ನಲಾಗಿದೆ. ಸಿನಿಮಾ ಬಜೆಟ್ ಸುಮಾರು 100 ಕೋಟಿ ರೂಪಾಯಿ ಎಂದು ವರದಿಯಾಗಿದೆ. ಅಲ್ಲದೇ ತಾಂತ್ರಿಕವಾಗಿಯೂ ಈ ಚಿತ್ರ ಅಡ್ವಾನ್ಸ್ ಆಗಿರುತ್ತೆ ಅನ್ನೋದು ಗೊತ್ತಾಗಿದೆ. ಮತ್ತೊಂದೆಡೆ ಯುಐ ಚಿತ್ರ ರಿಲೀಸ್ ಯಾವಾಗ? ಅನ್ನೋ ಪ್ರಶ್ನೆ ಅಭಿಮಾನಿಗಳ ವಲಯದಲ್ಲಿದೆ. ನಿರ್ಮಾಪಕರ ಮೂಲಗಳ ಪ್ರಕಾರ, ಈ ಸಿನಿಮಾ ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಬಹುದು ಎನ್ನಲಾಗಿದೆ. ಸದ್ಯ ಕನ್ನಡ ಚಿತ್ರರಂಗದಲ್ಲಿ ನಿರ್ಮಾಣವಾಗುತ್ತಿರುವ ಹೈ ಬಜೆಟ್ ಚಿತ್ರಗಳಲ್ಲಿ ಯುಐ ಕೂಡ ಒಂದು. ಹಲವಾರು ಸ್ಪೆಷಾಲಿಟಿಗಳಿಗೆ ಸೌತ್ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿರುವ ಈ ಚಿತ್ರದ ಮೂಲಕ ಉಪ್ಪಿ ಪ್ರೇಕ್ಷಕರಿಗೆ ಏನು ಹೇಳಲು ಹೊರಟಿದ್ದಾರೆ ಅನ್ನೋದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ:ಉಪ್ಪಿ ನಿರ್ದೇಶನದ UI ಸಿನಿಮಾ ಎಡಿಟಿಂಗ್ ಶುರು: 8 ವರ್ಷಗಳ ಬಳಿಕ ಮಾನಿಟರ್ ಮುಂದೆ ಕುಳಿತ ರಿಯಲ್ ಸ್ಟಾರ್