ಪ್ಯಾನ್ ಇಂಡಿಯಾ ಮಟ್ಟದಲ್ಲಿ ಟ್ರೆಂಡಿಂಗ್‌ನಲ್ಲಿರುವ ಸಿನಿಮಾ ಎಂದರೆ ಅದು ಕನ್ನಡದ ‘ಕಬ್ಜ’. ಈಗಾಗಲೇ ಟೀಸರ್ ಹಾಗು ಎರಡು ಹಾಡುಗಳಿಂದ ಜನಮನ ಗೆದ್ದಿರುವ ಚಿತ್ರದಿಂದ ಇದೀಗ ಪಡ್ಡೆ ಹುಡುಗರ ಹೃದಯಕ್ಕೆ ಹತ್ತಿರವಾಗುವ ಹೊಸ ಹಾಡು ಬಿಡುಗಡೆಯಾಗಿದೆ. ಇತ್ತೀಚೆಗೆ ಆರ್.ಚಂದ್ರು ಅವರ ತವರು ಶಿಡ್ಲಘಟ್ಟದಲ್ಲಿ ಚಿತ್ರದ ‘ಚುಮ್ ಚುಮ್ ಚಳಿ ಚಳಿ, ತಬ್ಕೊ ಚಳುವಳಿ’ ಎಂಬ ಮಾಸ್ ಹಾಡು ಜನಸಾಗರದ ನಡುವೆ ಬಿಡುಗಡೆಯಾಗಿತ್ತು.
ಪ್ರಮೋದ್ ಮರವಂತೆ ಬರೆದಿರುವ ಈ ಹಾಡಿಗೆ ಐರಾ ಉಡುಪಿ, ಮನೀಶ್ ದಿನಕರ್ ಹಾಗೂ ಸಂತೋಷ್ ವೆಂಕಿ ಧ್ವನಿ ನೀಡಿದ್ದಾರೆ. ರವಿ ಬಸ್ರೂರ್ ಸಂಗೀತವಿದೆ. ಆನಂದ್ ಆಡಿಯೋ ಮೂಲಕ ಹಾಡು ಬಿಡುಗಡೆಯಾಗಿದೆ. ಶಿಡ್ಲಘಟ್ಟದ ಜೂನಿಯರ್ ಕಾಲೇಜಿನ ನೆಹರು ಮೈದಾನದಲ್ಲಿ ನಡೆದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಶಿವರಾಜ್‌ಕುಮಾರ್, ಗೀತಾ ಶಿವರಾಜ್‌ಕುಮಾರ್, ಆರೋಗ್ಯ ಸಚಿವ ಕೆ. ಸುಧಾಕರ್, ಶಿಡ್ಲಘಟ್ಟದ ಶಾಸಕ ಮುನಿಯಪ್ಪ, ಸಮಾಜ ಸೇವಕ ರಾಮಚಂದ್ರ ಗೌಡ, ಹೆಚ್.ಎಂ.ರೇವಣ್ಣ, ವಿತರಕ ಆನಂದ್ ಪಂಡಿತ್ ಸೇರಿದಂತೆ ಅನೇಕ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಭಾಗಿಯಾಗಿದ್ದರು.
ದೊಡ್ಡ ಪರದೆಯಲ್ಲಿ ಟೀಸರ್ ಗೀತೆಗಳನ್ನು ನೋಡಿದ ಜನರು ಸಂಭ್ರಮಿಸಿದರು. ಗುರುಕಿರಣ್ ಗಾಯನ, ರೋಬೋ ಗಣೇಶ್ ಡ್ಯಾನ್ಸ್ ಕಾರ್ಯಕ್ರಮಗಳಿಗೆ ಚಪ್ಪಾಳೆಯ ಮಳೆಗರೆದರು. ಶಿವರಾಜ್ ಕುಮಾರ್ ಮಾತನಾಡಿ, "ನಾನು ಉಪೇಂದ್ರ ಅಭಿಮಾನಿ. ಅವರು ‘ಓಂ’ ಸಿನಿಮಾ ಮೂಲಕ ಇಡೀ ಭಾರತಕ್ಕೆ ರೌಡಿಸಂ ಆಧಾರಿತ ಚಿತ್ರ ನೀಡಿದವರು. ಅವರ ಜೊತೆ ಕೆಲಸ ಮಾಡುವುದೇ ಖುಷಿ. ಆರ್.ಚಂದ್ರು ಕೂಡಾ ಅದ್ಭುತ ಸಿನಿಮಾಗಳನ್ನು ನೀಡುತ್ತಿದ್ದಾರೆ" ಎಂದು ಹೇಳಿ ತಂಡಕ್ಕೆ ಶುಭ ಹಾರೈಸಿ ಓಂ ಸಿನಿಮಾದ ಡೈಲಾಗ್ ಹೇಳಿದರು. ಬಳಿಕ "ಚುಮ್ ಚುಮ್" ಗೀತೆಗೆ ಹೆಜ್ಜೆ ಹಾಕಿದರು.
ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, "ಇದು ಕಬ್ಜ ಸಿನಿಮಾದ ಹಬ್ಬ. ಈ ಹಾಡು ಬಿಡುಗಡೆ ಸಮಾರಂಭವನ್ನು ಚಂದ್ರು ಅವರಿಗೆ ನಮ್ಮ ಚಿಕ್ಕಬಳ್ಳಾಪುರದಲ್ಲಿ ಮಾಡೋಣ ಎಂದಿದ್ದೆ. ಆದರೆ, ಅವರು ತಮ್ಮ ತವರಲ್ಲಿ ಮಾಡಿದ್ದಾರೆ. ಈ ಮೊದಲು ನಾನು "ಆರ್ ಆರ್ ಆರ್" ಚಿತ್ರದ ಆಡಿಯೋ ಲಾಂಚ್ ಮಾಡಿದ್ದೆ. ಅದು ಹಿಟ್ ಆಯ್ತು. ಅದಕ್ಕಿಂತ ದೊಡ್ಡ ಮಟ್ಟದಲ್ಲಿ ಕಬ್ಜ ಗೆಲ್ಲಬೇಕು. ಇದನ್ನು ಸದಭಿರುಚಿಯ ಯುವಕರ ಸಿನಿಮಾ ಎನ್ನಬಹುದು. ಸಿನಿಮಾ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಲಿ. ಇಂದು ಎಲ್ಲೆಡೆ ಕನ್ನಡ ಸಿನಿಮಾಗಳನ್ನು ಜನರು ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ" ಎಂದರು.