ಹಿಂದಿ ರಾಷ್ಟ್ರೀಯ ಭಾಷೆಯಲ್ಲ ಎಂಬ ವಿಚಾರವಾಗಿ ಬಾಲಿವುಡ್ ನಟ ಅಜಯ್ ದೇವಗನ್ ಹಾಗು ಸುದೀಪ್ ನಡುವೆ ನಡೆದ ಟ್ವಿಟರ್ ಸಂಭಾಷಣೆ ದೇಶದೆಲ್ಲೆಡೆ ಸಂಚಲನ ಸೃಷ್ಟಿಸಿದೆ. ಸುದೀಪ್ ಪರವಾಗಿ ಮೋಹಕ ತಾರೆ ರಮ್ಯಾ, ಚೇತನ್, ನೀನಾಸಂ ಸತೀಶ್ ಸೇರಿದಂತೆ ಸಾಕಷ್ಟು ತಾರೆಯರು ಧ್ವನಿ ಎತ್ತಿದ್ದಾರೆ. ಇದೀಗ ನಟ ಹಾಗು ಕೃಷಿ ಸಚಿವ ಬಿ.ಸಿ.ಪಾಟೀಲ್, ನಿರ್ದೇಶಕ ಯೋಗರಾಜ್ ಭಟ್ ಹಾಗು ಖಳನಟ ಪಾತ್ರಗಳಲ್ಲಿ ಪ್ರಖ್ಯಾತಿ ಹೊಂದಿರುವ ನಟ ರವಿಶಂಕರ್ ಪ್ರತಿಕ್ರಿಯೆ ನೀಡಿದ್ದಾರೆ.
ಬಿ.ಸಿ.ಪಾಟೀಲ್ ಮಾತನಾಡಿ, ಕಲೆ ಹಾಗು ಕಲಾವಿದನಿಗೆ ಭಾಷೆಯ ನಿರ್ಬಂಧ ಇಲ್ಲ ಅನ್ನೋದಕ್ಕೆ ದಕ್ಷಿಣದ ಸಿನಿಮಾಗಳು ಉತ್ತರ ಭಾರತದಲ್ಲಿ ಜಯಭೇರಿ ಬಾರಿಸ್ತಿರೋದೇ ಸಾಕ್ಷಿ. ಕನ್ನಡ ಅಲ್ಲದೇ ತೆಲುಗು, ತಮಿಳು, ಮಲೆಯಾಳಂ ಸಿನಿಮಾಗಳು ಹಿಂದಿಗೆ ಡಬ್ ಆಗಿ ವಾಹಿನಿಗಳಲ್ಲಿ ಪ್ರಚಾರ ಆಗುತ್ತಿವೆ. ಆದರೆ, ಅದರಲ್ಲಿ ಸ್ವಾರ್ಥ ಬೆರೆಸೋದು ಸರಿಯಲ್ಲ. ಹಿಂದಿ ಭಾಷೆಯನ್ನು ದೇಶದೆಲ್ಲೆಡೆ ಹೆಚ್ಚಾಗಿ ಬಳಸಲಾಗುತ್ತಿದೆ, ಹಿಂದಿ ರಾಷ್ಟ್ರ ಭಾಷೆ ಹೌದೋ ಅಥವಾ ಇಲ್ಲವೋ ಅನ್ನೋದನ್ನು ಸಂವಿಧಾನದಲ್ಲಿ ತೀರ್ಮಾನ ಮಾಡಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಜಾಣ್ಮೆಯ ಉತ್ತರ ನೀಡಿದರು.