ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ ಇದೀಗ ಪ್ಯಾನ್ ಇಂಡಿಯಾ ನಟ. ಹಾಗಾಗಿ, ವಿಶೇಷ ಪರಿಚಯ ಬೇಕೆನಿಸದು. ಕೆಜಿಎಫ್ ಎಂಬ ಒಂದೆಸರು ಸಾಕಲ್ಲವೇ ಇದಕ್ಕೆ. ಕಳೆದ ಐದು ವರ್ಷಗಳಲ್ಲಿ ಇವರು ಮಾಡಿದ್ದು ಎರಡೇ ಸಿನಿಮಾ. ಆದ್ರೆ ಅಮೋಘ ಅಭಿನಯ ನಟನ ಜನಪ್ರಿಯತೆಯನ್ನು ನೂರ್ಮಡಿಸಿದೆ. ದೇಶ, ವಿದೇಶಗಳಲ್ಲೂ ತಮ್ಮದೇ ಆದ ಸ್ಟಾರ್‌ಡಮ್ ಸೃಷ್ಟಿಸಿದ್ದಾರೆ. ಅಭಿಮಾನಿಗಳ ಬಾಯಲ್ಲಿ ರಾಕಿ ಭಾಯ್ ಎಂದೇ ಫೇಮಸ್ ಆಗಿದ್ದಾರೆ. ಆದರೆ ಯಶ್ ಕುರಿತು 'ಟಾಲಿವುಡ್ ಮಾಸ್ ಮಹಾರಾಜ' ರವಿತೇಜ ಕೊಟ್ಟಿರುವ ಸ್ಟೇಟ್ಮೆಂಟ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
'ಟೈಗರ್ ನಾಗೇಶ್ವರ್ ರಾವ್' ಸಿನಿಮಾ ಪ್ರಮೋಶನ್: ರವಿತೇಜ ಅಭಿನಯದ ಮುಂದಿನ ಸಿನಿಮಾ 'ಟೈಗರ್ ನಾಗೇಶ್ವರ್ ರಾವ್'. ರವಿತೇಜ ಸದ್ಯ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ದಕ್ಷಿಣದಿಂದ ಹಿಡಿದು ಉತ್ತರದವರೆಗೂ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಏಕೆಂದರೆ, ಇದು ಅವರ ವೃತ್ತಿ ಜೀವನದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಹಾಗಾಗಿ, ಬಾಲಿವುಡ್ ಕೋಟೆಯಲ್ಲಿ ಸರಣಿ ಸಂದರ್ಶನಗಳನ್ನು ನೀಡುತ್ತಿದ್ದಾರೆ.
ಟಾಲಿವುಡ್ ಸ್ಟಾರ್ಸ್ ಗುಣಗಾನ: ಇತ್ತೀಚೆಗೆ ಬಾಲಿವುಡ್ ಮಾಧ್ಯಮವೊಂದರ ಸಂದರ್ಶನದಲ್ಲಿ ದಕ್ಷಿಣದ ಕೆಲ ಸೂಪರ್ ಸ್ಟಾರ್ಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರತಿ ಪ್ರಶ್ನೆಗಳಿಗೂ ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಉತ್ತರ ನೀಡಿದ್ದಾರೆ. ಆರ್ಆರ್ಆರ್ ಮೂಲಕ ವಿಶ್ವಾದ್ಯಂತ ಜನಪ್ರಿಯತೆ ಹೆಚ್ಚಿಸಿಕೊಂಡಿರುವ ರಾಮ್ ಚರಣ್ ಬಗ್ಗೆ ಪ್ರಶ್ನೆ ಎದುರಾದಾಗ, ಅವರ ನೃತ್ಯವನ್ನು ಇಷ್ಟಪಡುತ್ತೇನೆ. ಉತ್ತಮ ಡ್ಯಾನ್ಸರ್ ಎಂದರು. ಪ್ರಭಾಸ್ ಹಾಗೂ ರಾಜಮೌಳಿ ವಿಷನರಿಗಳು (ದೂರದೃಷ್ಟಿ) ಎಂದರು.