ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋ ವೈರಲ್ ಆದ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ರಣ್ಬೀರ್ ಕಪೂರ್ ಹಾಗೂ ಸಂದೀಪ್ ರೆಡ್ಡಿ ವಂಗಾ ಅವರೊಂದಿಗೆ ಮುಂಬೈನಲ್ಲಿರುವ ಟಿ - ಸೀರೀಸ್ನ ಪ್ರಧಾನ ಕಚೇರಿಯಿಂದ ಹೊರಟಿರುವ ದೃಶ್ಯ ವೈರಲ್ ಆಗಿದೆ.
ಪಾಪರಾಜಿಗಳು ಶೇರ್ ಮಾಡಿರುವ ವಿಡಿಯೋದಲ್ಲಿ, ಈ ಮೂವರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಜೀನ್ಸ್, ಟೀ-ಶರ್ಟ್ ಧರಿಸಿ ರಶ್ಮಿಕಾ ಕ್ಯಾಶುವಲ್ ಲುಕ್ ಬೀರಿದ್ದಾರೆ. ಕೈಯಲ್ಲಿ ಬ್ಯಾಗ್, ಪೇಪರ್ ಹಿಡಿದಿದ್ದರು. ರಶ್ಮಿಕಾ ಮಂದಣ್ಣ ವೇಗವಾಗಿ ನಡೆದು ಕಾರ್ ಹತ್ತಿದ್ದಾರೆ. ರಣ್ಬೀರ್ ಸಹ ಅದೇ ಕಾರ್ನಲ್ಲಿ ಕುಳಿತು ಹೊರಟಿದ್ದಾರೆ. ಇದೇ ಮೊದಲ ಬಾರಿ ರಶ್ಮಿಕಾ - ರಣ್ಬೀರ್ ಸ್ಕ್ರೀನ್ ಶೇರ್ ಮಾಡಿದ್ದು, ಅನಿಮಲ್ ಸಿನಿಮಾ ಡಿಸೆಂಬರ್ 1ರಂದು ತೆರೆಕಾಣಲಿದೆ.
ರಶ್ಮಿಕಾ ಮಂದಣ್ಣ ವಿಡಿಯೋ: ಪಾಪರಾಜಿ ಸಂಸ್ಕೃತಿಗೆ ರಶ್ಮಿಕಾ ಮಂದಣ್ಣ ಒಗ್ಗಿಕೊಂಡಿದ್ದಾರೆ. ಸದಾ ಪಾಪರಾಜಿಗಳ ಕ್ಯಾಮರಾಗಳಿಗೆ ಮುಗುಳ್ನಗೆ ಬೀರುವ ರಶ್ಮಿಕಾ ಈ ಬಾರಿ ಕ್ಯಾಮರಾಗಳಿಗೆ ಪೋಸ್ ಕೊಡದೇ ಬೇಗನೆ ಕಾರು ಹತ್ತಿ ಕುಳಿತರು. ಮತ್ತೊಂದೆಡೆ ಬಾಲಿವುಡ್ ನಟ ರಣ್ಬೀರ್ ಕಪೂರ್ ಸ್ವೆಟ್‌ಶರ್ಟ್, ಡೆನಿಮ್ ಪ್ಯಾಂಟ್, ಕ್ಯಾಪ್ ಧರಿಸಿ ಕಂಡುಬಂದರು. ನಟ ಸಹ ರಶ್ಮಿಕಾ ಇದ್ದ ವಾಹನದಲ್ಲೇ ಹೋದರು. ಅದಾಗ್ಯೂ, ಕ್ಯಾಮರಾಗಳಿಗೆ, ಸೆಲ್ಫಿಗಳಿಗೆ ರಣ್ಬೀರ್ ಪೋಸ್ ಕೊಟ್ಟಿದ್ದಾರೆ.
ಹಿರಿಯ ನಟ ಅಮಿತಾಭ್ ಬಚ್ಚನ್ ಸೋಮವಾರ ಡೀಪ್‌ಫೇಕ್ ವಿಡಿಯೋ ಬಗ್ಗೆ ಪೋಸ್ಟ್ ಶೇರ್ ಮಾಡಿ ಗಮನ ಸೆಳೆದರು. ನಕಲಿ ದೃಶ್ಯಗಳ ವಿರುದ್ಧ ಕಾನೂನು ಕ್ರಮಕ್ಕಾಗಿ ಆಗ್ರಹಿಸಿದರು. ನಂತರ ಸ್ವತಃ ನಟಿ ರಶ್ಮಿಕಾ ಮಂದಣ್ಣ ಅವರೇ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿ, ತಮ್ಮ ದುಃಖ ಹೊರಹಾಕಿದ್ದರು.