ಕರ್ನಾಟಕ

karnataka

ETV Bharat / entertainment

ಸ್ಯಾಂಡಲ್‌ವುಡ್ ತಾರೆಯರ ಸಂಕ್ರಾಂತಿ ಜೋಶ್‌: ಮತ್ತೆ ಟ್ರೋಲ್​ ಆದ ರಶ್ಮಿಕಾ ಮಂದಣ್ಣ - ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳ ಸಂಕ್ರಾಂತಿ ಸಡಗರ

ಈ ಬಾರಿ ಸಂಕ್ರಾಂತಿ ಸಡಗರ, ಸಂಭ್ರಮದಿಂದ ತುಂಬಿತ್ತು. ಚಂದನವನದ ಸೆಲೆಬ್ರಿಟಿಗಳೆಲ್ಲ ಸುಂದರ ಮತ್ತು ತರಹೇವಾರು ಬಟ್ಟೆ ಧರಿಸುವ ಮೂಲಕ ಹಬ್ಬಕ್ಕೆ ಸಾಕ್ಷಿಯಾದರು. ನಟಿ ರಶ್ಮಿಕಾ ಮಂದಣ್ಣ ಕೂಡ ಹೊಸ ಬಟ್ಟೆ ಧರಿಸಿ ಸಂಕ್ರಾಂತಿ ಹಬ್ಬದ ಶುಭ ಕೋರಿದ್ದಾರೆ. ಆದರೆ, ಅವರ ಪೋಸ್ಟ್​ ನೋಡಿದ ಕೆಲ ನೆಟಿಜನ್ಸ್​ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ಮಾಡಲಾರಂಭಿಸಿದ್ದಾರೆ.

Rashmika Trolled again
Rashmika Trolled again

By

Published : Jan 16, 2023, 1:40 PM IST

Updated : Jan 16, 2023, 2:05 PM IST

ಹೊಸ ವರ್ಷದ ಮೊದಲ ಹಬ್ಬವಾದ ಮಕರ ಸಂಕ್ರಾಂತಿಯ ಸಂಭ್ರಮಕ್ಕೆ ಸ್ಯಾಂಡಲ್​ವುಡ್‌ ತಾರಾ ಬಳಗವೇ ಸಾಕ್ಷಿಯಾಯಿತು. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಂದದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸಡಗರದಲ್ಲಿ ಮಿಂದೆದ್ದರು. ಬಹುಭಾಷಾ ತಾರೆ ರಶ್ಮಿಕಾ ಮಂದಣ್ಣ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಕಂದು ಬಣ್ಣದ ಕುರ್ತಾ ಧರಿಸಿರುವ ಕೊಡಗಿನ ಕುವರಿ ನಮಸ್ಕಾರ ಮಾಡುವ ಭಂಗಿಯಲ್ಲಿ ಫೋಟೋ ಕ್ಲಿಕ್‌ ಮಾಡಿ ತಮ್ಮ ಇನ್ಸ್​ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳಲ್ಲೂ ಸಂಕ್ರಾಂತಿ ಶುಭಾಶಯ ಎಂದು ಬರೆದುಕೊಂಡಿದ್ದಾರೆ. ಮೊದಲು ಕನ್ನಡದಲ್ಲಿ ಸಂಕ್ರಾಂತಿಯ ಶುಭಾಶಯಗಳು! ಎಂದು ಬರೆದಿರುವುದನ್ನು ನಾವು ಕಾಣಬಹುದು.

ನಂತರ ತಮಿಳಿನಲ್ಲಿ, அனைவருக்கும் இனிய பொங்கல் திருநாள் நல்வாழ்த்துக்கள்!, ಹಿಂದಿಯಲ್ಲಿ संक्रांति की शुभकामनाएं!, ತೆಲುಗು ಭಾಷೆಯಲ್ಲಿ సంక్రాంతి శుభాకాంక్షలు!, ಮಲಯಾಳಂನಲ್ಲಿ പൊങ്കൽ ആശംസകൾ! ಹಾಗೂ ಇಂಗ್ಲಿಷ್​​ನಲ್ಲಿ Happy Sankranti! ಎಂದು ಎಲ್ಲ ಭಾಷೆಯಲ್ಲಿಗಳಲ್ಲಿಯೂ ಹಬ್ಬದ ಶುಭಾಶಯ ಕೋರಿದ್ದಾರೆ. ಮೊದಲು ಕನ್ನಡದಲ್ಲಿ ಬರೆದುಕೊಂಡ ಬಗ್ಗೆ ಅನೇಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಎಲ್ಲರೂ ನಟಿಗೆ ಮರಳಿ ಶುಭಾಶಯ ತಿಳಿಸಿದ್ದಾರೆ. ಆದರೆ, ಕೆಲವರು ಅಸಮಾಧಾನ ತೋರುವ ಮೂಲಕ ಟ್ರೋಲ್‌ ಮಾಡಲು ಆರಂಭಿಸಿದ್ದಾರೆ.

'ನೀವು ಮೊದಲು ಕನ್ನಡದಲ್ಲಿ ಬರೆದ ಮಾತ್ರಕ್ಕೆ ನಿಮಗೆ ಕನ್ನಡದ ಬಗ್ಗೆ ಪ್ರೀತಿ ಎಂದು ಹೇಳಲು ಸಾಧ್ಯವಿಲ್ಲ. ಇದ್ದಕ್ಕಿದ್ದಂತೆ ನಿಮಗೆ ಕನ್ನಡದ ಮೇಲೆ ಇಂತಹ ಪ್ರೀತಿ ಹೇಗೆ ಬಂತು? ನೀವು ಮೊದಲು ಮಾಡಿದ್ದನ್ನೆಲ್ಲಾ ನಾವು ಮರೆಯುವುದಿಲ್ಲ. ನಾವು ಕನ್ನಡಿಗರು. ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು ಎಂಬುದನ್ನು ಅನುಸರಿಸುತ್ತೇವೆ. ನಿಮ್ಮ ಈ ತೋರಿಕೆಯ ಕನ್ನಡ ಪ್ರೀತಿ ನಮಗೆ ಬೇಡ' ಎಂದು ಕೆಲವರು​ ಕಮೆಂಟ್‌ ಮಾಡಿದ್ದಾರೆ. ಇನ್ನು ಕೆಲವರು ಈ ಬದಲಾವಣೆ ನಮಗೆ ಬೇಕಿತ್ತು, ಒಳ್ಳೆಯದಾಗಲಿ ಎಂದು ಬರೆದುಕೊಂಡರೆ ಮತ್ತೆ ಕೆಲವರು ನೀವಿನ್ನೂ ಎತ್ತರಕ್ಕೆ ಹೋಗಬೇಕು ಎಂದು ಆಶಿಸಿ ಬರೆದಿದ್ದಾರೆ. ಜೊತೆಗೆ ನಟಿಯ ಸೊಗಸಾದ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.

ಡಿ. 25ರಂದು ತಮ್ಮ ನಟನೆಯ ಮಿಷನ್ ಮಜ್ನು ಚಿತ್ರದ ಹಾಡು ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ಅವರು ಒಂದು ಹೇಳಿಕೆಯಿಂದ ಸಿಕ್ಕಾಪಟ್ಟೆ ಟ್ರೋಲ್‌ ಆಗಿದ್ದರು. ಅದಕ್ಕೂ ಮುನ್ನ ತಮ್ಮನ್ನು ಲಾಂಚ್ ಮಾಡಿದ ಪ್ರೊಡಕ್ಷನ್ ಹೌಸ್ ಹೆಸರು ಬಳಸದ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದಿಂದ ಅವರನ್ನು ಬ್ಯಾನ್ ಮಾಡಬೇಕು ಎಂಬ ಕೂಗು ಸಹ ಕೇಳಿ ಬಂದಿತ್ತು. ಅದಕ್ಕೆ ಪ್ರತಿಕ್ರಿಯಿಸಿದ್ದ ರಶ್ಮಿಕಾ "ನಾನು ಅವರನ್ನು ಪ್ರೀತಿಸುತ್ತೇನೆ, ಉಳಿದದ್ದು ಅವರಿಗೆ ಬಿಟ್ಟದ್ದು" ಎಂದು ತಿಳಿಸಿದ್ದರು. ಜೊತೆಗೆ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವ ಅಗತ್ಯವಿಲ್ಲ ಎಂದು ಕೂಡ ಹೇಳಿದ್ದರು.

ತಾರಾ ಮೆರುಗು:ಸ್ಯಾಂಡಲ್‌ವುಡ್‌ನ ಬಹುತೇಕ ತಾರೆಯರು ಕುಟುಂಬ ಸಮೇತರಾಗಿ ಹಬ್ಬ ಆಚರಿಸಿದ್ದು ಕಂಡು ಬಂದಿತು. ನಟ ರಿಷಭ್‌ ಶೆಟ್ಟಿ ಅವರು ಪತ್ನಿ ಪ್ರಗತಿ ಮತ್ತು ಇಬ್ಬರು ಮಕ್ಕಳೊಂದಿಗೆ ಇರುವ ಫೋಟೊ ಶೇರ್‌ ಮಾಡಿ, ಎಳ್ಳು-ಬೆಲ್ಲಬೀರುತ, ಸರ್ವರಿಗೂ ಖುಷಿಯ ಹಂಚೋಣ ಎಂದು ಬರೆದು ಅಭಿಮಾನಿಗಳಿಗೆ ಹಬ್ಬದ ಶುಭಾಶಯ ಕೋರಿದ್ದಾರೆ. ನಟ ಯಶ್ ಅವರು ಕೂಡ ಭಾನುವಾರ ಹಾಸನದಲ್ಲಿರುವ ತಮ್ಮ ಫಾರ್ಮ್‌ಹೌಸ್‌ನಲ್ಲಿ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ತಂದೆ, ತಾಯಿ ಹಾಗೂ ಪತ್ನಿ ರಾಧಿಕಾ ಪಂಡಿತ್, ಮಕ್ಕಳಾದ ಆಯ್ರಾ ಮತ್ತು ಯಥರ್ವ್‌ ಜೊತೆಗೆ ಯಶ್ ಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ. ಹಬ್ಬದ ಆಚರಣೆಯ ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ನಟಿ ಅಮೂಲ್ಯ ತಮ್ಮ ಅವಳಿ ಮಕ್ಕಳನ್ನು ಪುಟ್ಟ ಕರುವಿನ ಮೇಲೆ ಕೂರಿಸಿರುವ ಫೋಟೊ ಮಾಡಿ ಹಬ್ಬದ ಶುಭ ಕೋರಿದ್ದಾರೆ. ನಟ ಪ್ರಜ್ವಲ್‌ ದೇವರಾಜ್‌ ಕುಟುಂಬ ಕೂಡ ಸಪರಿವಾರಸಮೇತ ಹಬ್ಬ ಆಚರಿಸಿದ್ದಾರೆ. ಇದೇ ರೀತಿ ನಟಿ ಸಪ್ತಮಿ ಗೌಡ ತಾವು ಸಾಂಪ್ರದಾಯಿಕ ಉಡುಪಿನಲ್ಲಿರುವ ಫೋಟೊ ಶೇರ್‌ ಮಾಡಿ ಅಭಿಮಾನಿಗಳಿಗೆ ಹಬ್ಬದ ವಿಶ್‌ ಮಾಡಿದ್ದರೆ, ನಟಿ ವೈಷ್ಣವಿ ಕೂಡ ಟ್ರೆಡಿಷನಲ್‌ ಥೀಮ್‌ನಲ್ಲಿ ಕಂಗೊಳಿಸಿ ಹಬ್ಬ ಆಚರಿಸಿದ್ದಾರೆ. ನಟಿ ಮೇಘಾ ಶೆಟ್ಟಿ ವರ್ಷದ ಮೊದಲ ಹಬ್ಬದಂದು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ನಟಿ ನಭಾ ನಟೇಶ್‌ ಫೆಸ್ಟಿವಲ್‌ ಥೀಮ್‌ನಲ್ಲಿ ಫೋಟೊಶೂಟ್‌ ಮಾಡಿಸಿಕೊಂಡಿದ್ದಾರೆ. ನಟ ಶರಣ್‌, ಹಿರಿಯ ನಟಿ ಸುಮಲತಾ ಅಂಬರೀಶ್, ಜೋಗಿ ಪ್ರೇಮ್​ ಸೇರಿದಂತೆ ಮುಂತಾದವರು ಮಕರ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದ್ದಾರೆ.

ಇದನ್ನೂ ಓದಿ: ಬಾಲಿವುಡ್​ಗೆ ಕಾಲಿಟ್ಟ 'ಕಾಂತಾರ' ನಟಿ: ದಿ ವ್ಯಾಕ್ಸಿನ್​ ವಾರ್​ ಚಿತ್ರದಲ್ಲಿ ಸಪ್ತಮಿ ಗೌಡ

Last Updated : Jan 16, 2023, 2:05 PM IST

ABOUT THE AUTHOR

...view details