ನಟಿ ರಶ್ಮಿಕಾ ಮಂದಣ್ಣರ ದೀಪ್ಫೇಕ್ ವಿಡಿಯೋ ವೈರಲ್ ವಿಚಾರವಾಗಿ ಭಾರತೀಯ ಚಿತ್ರರಂಗ ಒಗ್ಗಟ್ಟು ಪ್ರದರ್ಶಿಸಿದೆ. ವದಂತಿಯ ಗೆಳತಿ ರಶ್ಮಿಕಾ ಮಂದಣ್ಣ ಅವರ ವಿಚಾರಕ್ಕೆ ಸಂಬಂಧಿಸಿದಂತೆ ನಟ ವಿಜಯ್ ದೇವರಕೊಂಡ ಸಹ ಪ್ರತಿಕ್ರಿಯೆ ನೀಡಿದ್ದರು. ಇಂತಹದ್ದು ಯಾರಿಗೂ ಆಗಬಾರದು, ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದರು. ಅಮಿತಾಭ್ ಬಚ್ಚನ್, ಕೀರ್ತಿ ಸುರೇಶ್, ಮೃಣಾಲ್ ಠಾಕೂರ್, ಇಶಾನ್ ಖಟ್ಟರ್, ನಾಗ ಚೈತನ್ಯ ಸೇರಿದಂತೆ ಹಲವು ಸೆಲೆಬ್ರಿಟಿಗಳು ಈ ಬಗ್ಗೆ ಪ್ರತಿಕ್ರಿಯಿಸಿದ್ದರು.
ಮನರಂಜನಾ ಉದ್ಯಮಕ್ಕೆ ಆಘಾತ ನೀಡಿರುವ ಆತಂಕಕಾರಿ ಡೀಪ್‌ಫೇಕ್ ವಿಡಿಯೋಗೆ ಪ್ರತಿಕ್ರಿಯಿಸುವ ವೇಳೆ ಕಾನೂನು ಕ್ರಮಕ್ಕೆ ತಾರೆಯರು ಕರೆ ನೀಡಿದ್ದಾರೆ. ವಿಜಯ್ ದೇವರಕೊಂಡ ಶೇರ್ ಮಾಡಿರುವ ಇನ್‌ಸ್ಟಾಗ್ರಾಮ್ ಸ್ಟೋರಿಯನ್ನು ರೀಶೇರ್ ಮಾಡಿರುವ ರಶ್ಮಿಕಾ ಮಂದಣ್ಣ ''Agreed Completely'' (ಒಪ್ಪಿದೆ) ಎಂದಿದ್ದಾರೆ.
'ರಶ್ಮಿಕಾ ಮಂದಣ್ಣ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಸರ್ಕಾರ ನಿರ್ಣಾಯಕ ಕ್ರಮ ತೆಗೆದುಕೊಳ್ಳುತ್ತದೆ' ಎಂಬ ಶೀರ್ಷಿಕೆಯ ಸುದ್ದಿಯೊಂದನ್ನು ವಿಜಯ್ ದೇವರಕೊಂಡ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ಭವಿಷ್ಯದ ರಕ್ಷಣೆಗೆ ಸೂಕ್ತ ಕ್ರಮ ಅಗತ್ಯ ಎಂಬುದನ್ನು ಒತ್ತಿ ಹೇಳಿದ್ದರು. ರಶ್ಮಿಕಾರ ಪರಿಸ್ಥಿತಿ ಯಾರಿಗೂ ಬರಬಾರದು, ಇಂತಹ ಕೃತ್ಯಗಳನ್ನು ತ್ವರಿತವಾಗಿ ಭೇದಿಸಲು ಮತ್ತು ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆಯಾಗುವಂತೆ ಸೂಕ್ತ ಕ್ರಮ ಜರುಗಬೇಕು ಎಂಬರ್ಥದಲ್ಲಿ ಬರೆದಿದ್ದರು. ರಶ್ಮಿಕಾ ಅವರು ವಿಜಯ್ ಅವರ ಇನ್‌ಸ್ಟಾಗ್ರಾಮ್ ಸ್ಟೋರಿಯನ್ನು ತಮ್ಮ ಅಧಿಕೃತ ಖಾತೆಯಲ್ಲಿ ರೀಶೇರ್ ಮಾಡಿದ್ದಾರೆ. ಜೊತೆಗೆ, ಗೆಳೆಯನ ನಿಲುವಿಗೆ ಸಂಪೂರ್ಣ ಒಪ್ಪಿಗೆ ಸೂಚಿಸಿದ್ದಾರೆ.