ಹೈದರಾಬಾದ್:ಪುಷ್ಪ: ದಿ ರೈಸ್ ಚಿತ್ರದಲ್ಲಿನ ಶ್ರೀವಲ್ಲಿ ಪಾತ್ರದ ಬಗ್ಗೆ ನಟಿ ಐಶ್ವರ್ಯಾ ರಾಜೇಶ್ ಮಾಡಿದ್ದ ಕಾಮೆಂಟ್‌ಗೆ ನಟಿ ರಶ್ಮಿಕಾ ಮಂದಣ್ಣ ಅಂತಿಮವಾಗಿ ಪ್ರತಿಕ್ರಿಯಿಸಿದ್ದಾರೆ. ಐಶ್ವರ್ಯಾ ಅವರು ರಶ್ಮಿಕಾ ಪಾತ್ರವನ್ನು ಉಲ್ಲೇಖಿಸಿ ಅವರ ಅರ್ಥವನ್ನು ಸ್ಪಷ್ಟಪಡಿಸಲು ಹೇಳಿಕೆಯನ್ನು ಬಿಡುಗಡೆ ಮಾಡಿದ ಒಂದು ದಿನದ ನಂತರ, ರಶ್ಮಿಕಾ ಅವರು ಐಶ್ವರ್ಯಾ ಅರ್ಥವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದಾರೆ ಮತ್ತು ವಿವರಣೆಯನ್ನು ನೀಡುವ ಅಗತ್ಯವಿಲ್ಲ ಎಂದು ಉತ್ತರ ನೀಡಿದ್ದಾರೆ.
ಇತ್ತೀಚೆಗೆ ಪುಷ್ಪಾ: ದಿ ರೈಸ್‌ನಲ್ಲಿ ರಶ್ಮಿಕಾ ಪಾತ್ರದ ಬಗ್ಗೆ ಮಾತನಾಡಿದ ಐಶ್ವರ್ಯಾ, ಆ ಪಾತ್ರದಲ್ಲಿ ನಾನು ಉತ್ತಮವಾಗಿ ನಟಿಸುತ್ತೇನೆ ಎಂದು ಹೇಳಿದ್ದೆ ಹೊರತು, ರಶ್ಮಿಕಾಗಿಂತ ಉತ್ತಮವಾಗಿ ನಟಿಸಬಲ್ಲೆ ಎಂಬ ಉದ್ದೇಶದಿಂದ ಹೇಳಿಲ್ಲ. ಆ ಪಾತ್ರವು ತನಗೆ ಸರಿಹೊಂದುತ್ತದೆ ಎಂದು ಹೇಳುತ್ತಿದ್ದೇನೆ ಎಂದು ಒತ್ತಿ ಹೇಳಿದ್ದರು. ತನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ರಶ್ಮಿಕಾ ಅವರ ಕೆಲಸದ ಬಗ್ಗೆ ನನಗೆ ಹೆಚ್ಚಿನ ಗೌರವವಿದೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.
ನಟಿ ಐಶ್ವರ್ಯಾ ರಾಜೇಶ್ ಕಾಮೆಂಟ್ ಮಾಡಿದ್ದೇನು?:ಐಶ್ವರ್ಯಾ ತನ್ನ ಹೇಳಿಕೆಯಲ್ಲಿ, "ಕೆಲಸದ ಬಗ್ಗೆ ಮಾತನಾಡುತ್ತಾ, ತೆಲುಗು ಚಿತ್ರರಂಗದಲ್ಲಿ ನಾನು ಯಾವ ರೀತಿಯ ಪಾತ್ರಗಳನ್ನು ಮಾಡಲು ಬಯಸುತ್ತೇನೆ ಎಂದು ಇತ್ತೀಚೆಗೆ ಸಂದರ್ಶನವೊಂದರಲ್ಲಿ ನನ್ನನ್ನು ಕೇಳಲಾಯಿತು. ನಾನು ತೆಲುಗು ಚಿತ್ರರಂಗವನ್ನು ತುಂಬಾ ಇಷ್ಟಪಡುತ್ತೇನೆ ಮತ್ತು ನಾನು ಖಂಡಿತವಾಗಿಯೂ ತೆಲುಗು ಸಿನಿಮಾ ಮಾಡುತ್ತೇನೆ ಎಂದು ಉತ್ತರಿಸಿದೆ. ನನಗೆ ಇಷ್ಟವಾದ ಪಾತ್ರಗಳು ಸಿಕ್ಕರೆ ಅದ್ಭುತವಾಗಿ ನಟಿಸಬಲ್ಲೆ. ಒಂದು ಉದಾಹರಣೆಯನ್ನು ಹೇಳುವುದಾದರೆ, ಪುಷ್ಪದಲ್ಲಿನ ಶ್ರೀವಲ್ಲಿ ಪಾತ್ರವು ನನಗೆ ತುಂಬಾ ಇಷ್ಟವಾಯಿತು ಎಂದು ನಾನು ಹೇಳಿದೆ, ಏಕೆಂದರೆ ಅಂತಹ ಪಾತ್ರಗಳು ನನಗೆ ಸರಿಹೊಂದುತ್ತವೆ ಎಂದು ನಾನು ಭಾವಿಸಿದೆ" ಎಂದು ತಿಳಿಸಿದ್ದರು. "ದುರದೃಷ್ಟವಶಾತ್, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರ ಅದ್ಭುತ ಕೆಲಸವನ್ನು ನಾನು ಅವಹೇಳನ ಮಾಡುತ್ತಿದ್ದೇನೆ ಎಂಬ ಭಾವನೆಯನ್ನು ಮೂಡಿಸಲು ಈ ರೀತಿಯಲ್ಲಿ ವರದಿ ಮಾಡಲಾಗುತ್ತಿದೆ" ಎಂದು ಅವರು ಬರೆದುಕೊಂಡಿದ್ದಾರೆ.