ಸ್ಯಾಂಡಲ್ವುಡ್ನಿಂದ ವೃತ್ತಿಜೀವನ ಆರಂಭಿಸಿ ಸದ್ಯ ಬಹುಭಾಷೆಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಅವರ ಮುಂದಿನ ಬಹುನಿರೀಕ್ಷಿತ ಬಾಲಿವುಡ್ ಸಿನಿಮಾ 'ಅನಿಮಲ್'. ರಣ್ಬೀರ್ ಕಪೂರ್ ಜೊತೆ ಇವರು ತೆರೆ ಹಂಚಿಕೊಂಡಿದ್ದು, ಇತ್ತೀಚೆಗೆ ಪ್ರಿ-ಟೀಸರ್ ಮೂಲಕ ಅನಿಮಲ್ ಸುದ್ದಿ ಮಾಡಿದೆ. 'ಕಬೀರ್ ಸಿಂಗ್' ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಚಿತ್ರವು ಈ ವರ್ಷ ಬಿಡುಗಡೆಗೆ ಸಜ್ಜಾಗಿದೆ. 2023ರ ಬಹುನಿರೀಕ್ಷಿತ ಚಲನಚಿತ್ರಗಳಲ್ಲಿ ಒಂದಾಗಿದ್ದು, ಯಶಸ್ವಿಯಾಗುವ ನಿರೀಕ್ಷೆಯಲ್ಲಿ ಚಿತ್ರತಂಡವಿದೆ. ಟ್ರೇಲರ್ ಬಿಡುಗಡೆಗಾಗಿ ಅಭಿಮಾನಿಗಳು ಕಾದು ಕುಳಿತಿರುವ ಈ ಹೊತ್ತಿನಲ್ಲಿ 'ಅನಿಮಲ್' ಸೆಟ್‌ನ ಕೆಲವು ಚಿತ್ರಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಫೋಟೋಗಳಲ್ಲಿ, ಬಾಲಿವುಡ್ ನಟ ರಣ್ಬೀರ್ ಕಪೂರ್ ಮತ್ತು ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಮುದ್ದಾದ ನಗು ಬೀರಿದ್ದಾರೆ. ವೈರಲ್ ಫೋಟೋಗಳಿಗೆ ಪ್ರತಿಕ್ರಿಯಿಸಿದ ಸಾಮಾಜಿಕ ಮಾಧ್ಯಮ ಬಳಕೆದಾರರು, "ಅವನು ಮ್ಯಾಚೋ ಮ್ಯಾನ್, ಅವಳು ಸನ್ಶೈನ್ ಗರ್ಲ್" ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರ, "ಕ್ಯೂಟ್ ಜೋಡಿ" ಎಂದು ಬರೆದಿದ್ದಾರೆ. ಮತ್ತೋರ್ವ ಸಾಮಾಜಿಕ ಜಾಲತಾಣ ಬಳಕೆದಾರರು, "ರಾವಣನು ದುಷ್ಟನಾಗಿದ್ದನು. ಆದರೆ ಅವನು (ರಣಬೀರ್) 'ಆದಿಪುರುಷ'ನಲ್ಲಿನ ಸೈಫ್‌ನಂತೆ ಮೂರ್ಖನಾಗಿರಲಿಲ್ಲ" ಎಂದು ಬರೆದಿದ್ದಾರೆ.
'ಅನಿಮಲ್' ಸಿನಿಮಾದಲ್ಲಿ ರಣ್ಬೀರ್, ರಶ್ಮಿಕಾ ಮಾತ್ರವಲ್ಲದೇ, ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 2023ರ ಆಗಸ್ಟ್ 11ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಿದ್ಧವಾಗಿದೆ. ಈ ಚಿತ್ರವು ಸನ್ನಿ ಡಿಯೋಲ್ ಅವರ ಮುಂಬರುವ ಚಿತ್ರ 'ಗದರ್ 2' ಮತ್ತು ಅಕ್ಷಯ್ ಕುಮಾರ್ ಅವರ OMG 2 ಸಿನಿಮಾದೊಂದಿಗೆ ಪೈಪೋಟಿ ಸಡೆಸಲಿದೆ. ಈ ಮೂರು ಚಿತ್ರಗಳು ಆಗಸ್ಟ್ನಲ್ಲಿ ತೆರೆಕಾಣಲಿದೆ.