ಸ್ಯಾಂಡಲ್ವುಡ್ನಿಂದ ವೃತ್ತಿಜೀವನ ಆರಂಭಿಸಿದ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಭಾರತೀಯ ಚಿತ್ರರಂಗದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಸದ್ಯ ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ಸೌತ್ ಸಿನಿಮಾ ಸುಂದರಿ. ನಟಿಯ ಮುಂದಿನ ಬಹುನಿರೀಕ್ಷಿತ ಚಿತ್ರಗಳು ಅನಿಮಲ್ ಮತ್ತು ಪುಷ್ಪಾ ದಿ ರೂಲ್. ಅನಿಮಲ್ ಬಿಡುಗಡೆಗೆ ಸಜ್ಜಾಗುತ್ತಿದ್ದರೆ, ಪುಷ್ಪಾ ಸೀಕ್ವೆಲ್ ಶೂಟಿಂಗ್ ಭರದಿಂದ ಸಾಗಿದೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ಸಿನಿಮಾ ವೃತ್ತೀಜೀವನ ಮತ್ತು ಸಹನಟ ರಣ್ಬೀರ್ ಕಪೂರ್ ಬಗ್ಗೆ ಮಾತನಾಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ 2016 ರಲ್ಲಿ ಮೂಡಿ ಬಂದ ಸಿನಿಮಾ ಕಿರಿಕ್ ಪಾರ್ಟಿ. ಚೊಚ್ಚಲ ಚಿತ್ರದಲ್ಲೇ ಯಶಸ್ಸು ಕಂಡ ಚೆಲುವೆ. ಸದ್ಯ ಪ್ಯಾನ್ ಇಂಡಿಯಾ ಸ್ಟಾರ್. ಅಲ್ಪಾವಧಿಯಲ್ಲೇ ಬಹಳ ದೂರ ಸಾಗಿದ ಸಿನಿ ಸಾಧಕಿ. ಸ್ವಯಂನಿರ್ಮಿತ ನಟಿಯಾಗಿ ತಮ್ಮ ಪ್ರಯಾಣವನ್ನು ಹಂಚಿಕೊಳ್ಳುತ್ತಾ, ಬದಲಾವಣೆಗಳ ಬಗ್ಗೆಯೂ ಒಪ್ಪಿಕೊಂಡರು. ''ಇತ್ತೀಚಿನ ದಿನಗಳಲ್ಲಿ ಬರಹಗಾರರು, ನಿರ್ದೇಶಕರು ಮಹಿಳೆಯರಿಗಾಗಿ ಉತ್ತಮ ಪಾತ್ರಗಳನ್ನು ರಚಿಸುತ್ತಿದ್ದಾರೆ. ಪ್ರೇಕ್ಷಕರು ಕಂಟೆಂಟ್ ಮತ್ತು ಅದ್ಭುತ ಪಾತ್ರಗಳಿಗೆ ಬೇಡಿಕೆ ಇಡುತ್ತಿದ್ದಾರೆ. ಅದು ನಮ್ಮ ಕೆಲ ಬದಲಾವಣೆಗಳಿಗೂ (ಚಿತ್ರರಂಗ, ಬಹುಭಾಷೆಗೆ ಒತ್ತು) ಕಾರಣವಾಗುತ್ತದೆ. ಹೊರಗಿನವರು ಉದ್ಯಮ ಪ್ರವೇಶಿಸುವಂತೆ ಮಾಡಲು ನಾವು ಕೆಲಸ ಮಾಡುವುದನ್ನು ಮುಂದುವರಿಸಬಹುದೆಂದು ಭಾವಿಸುತ್ತೇನೆ'' ಎಂದು ರಶ್ಮಿಕಾ ಮಂದಣ್ಣ ಸಂದರ್ಶನದಲ್ಲಿ ತಿಳಿಸಿದ್ದಾರೆ.
ರಣ್ಬೀರ್ ಕಪೂರ್ ಬಗ್ಗೆ ರಶ್ಮಿಕಾ ಹೇಳಿದ್ದಿಷ್ಟು: ನಟಿಯ ಮುಂದಿನ ಬಹುನಿರೀಕ್ಷಿತ ಸಿನಿಮಾ ಅನಿಮಲ್. ಮೊದಲ ಬಾರಿ ಬಾಲಿವುಡ್ ಚಾಕ್ಲೆಟ್ ಹೀರೋ ರಣ್ಬೀರ್ ಕಪೂರ್ ಜೊತೆ ತೆರೆಹಂಚಿಕೊಂಡಿದ್ದಾರೆ. ಬ್ರಹ್ಮಾಸ್ತ್ರ ನಟನ ಬಗ್ಗೆ ಮಾತನಾಡುತ್ತಾ, ಅತ್ಯಂತ ಬದ್ಧತೆಯೊಂದಿಗೆ ಕೆಲಸ ಮಾಡುವ ನಟ. ಅವರ ಈ ಗುಣದಿಂದ ಕೆಲಸದ ವಾತಾವರಣ ಬಹಳ ಉತ್ತಮವಾಗಿರುತ್ತದೆ ಎಂದು ತಿಳಿಸಿದರು. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಚಿತ್ರ ಡಿಸೆಂಬರ್ 1 ರಂದು ಥಿಯೇಟರ್ಗಳಲ್ಲಿ ತೆರೆಕಾಣಲಿದೆ.