ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಮುಂದಿನ ಚಿತ್ರ 'ರೈನ್ಬೋ'. ನಿನ್ನೆಯಷ್ಟೇ ಈ ಸಿನಿಮಾದ ಮುಹೂರ್ತ ಸಮಾರಂಭ ಹೈದರಾಬಾದ್ನಲ್ಲಿ ನೆರವೇರಿದೆ. ಶಂತರುಬನ್ ಚಿತ್ರಕಥೆ ಬರೆದಿದ್ದು, ಅವರೇ ನಿರ್ದೇಶಿಸಲಿರುವ 'ರೈನ್ಬೋ' ಸ್ತ್ರೀ ಪ್ರಧಾನ ಸಿನಿಮಾ ಆಗಿದ್ದು, ಚಿತ್ರದ ಮೊದಲ ಪೋಸ್ಟರ್ ಅನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದೆ. ನಟ ದೇವ್ ಮೋಹನ್ ಜೊತೆ ತೆರೆ ಹಂಚಿಕೊಳ್ಳಲಿರುವ ರಶ್ಮಿಕಾ ಮಂದಣ್ಣ ಅವರನ್ನು ನೀವು ಇದುವರೆಗೂ ನೋಡದ ಪಾತ್ರದಲ್ಲಿ ನೋಡಬಹುದಾಗಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾದಲ್ಲಿ ರಶ್ಮಿಕಾ ಅವರು ಬ್ಯುಸಿಯಾಗಿದ್ದು, ನಿರ್ದೇಶಕ ಶಂತರುಬನ್ ಕೊಟ್ಟಿರುವ ಹೇಳಿಕೆ ಸದ್ಯ ಸಂಚಲನ ಸೃಷ್ಟಿಸಿದೆ.
ಪುಷ್ಪ ಸಿನಿಮಾ ಬಳಿಕ ನಟಿ ರಶ್ಮಿಕಾ ಮಂದಣ್ಣ ಸಾಲು ಸಾಲು ಅವಕಾಶಗಳನ್ನು ಗಿಟ್ಟಿಸಿಕೊಂಡು ವೃತ್ತಿ ಜೀವನದಲ್ಲಿ ಮುನ್ನಡೆಯುತ್ತಿದ್ದಾರೆ. ತೆಲುಗು ನಟಿ ಸಮಂತಾ ರುತ್ ಪ್ರಭು ಕೂಡ ವಿಭಿನ್ನ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಇವರಿಬ್ಬರ ನ್ಯಾಶನಲ್ ವೈಡ್ ಸ್ಟಾರ್ ಡಮ್ ಉತ್ತುಂಗದಲ್ಲಿದೆ.
ರಶ್ಮಿಕಾ ಮಂದಣ್ಣ ಅವರು ಡ್ರೀಮ್ ವಾರಿಯರ್ಸ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸ್ತ್ರೀ ಪ್ರಧಾನ ದ್ವಿಭಾಷಾ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಕಾಲ್ಪನಿಕ ಪ್ರೇಮಕಥೆಯುಳ್ಳ ಈ ಸಿನಿಮಾದ ಶೂಟಿಂಗ್ ನಿನ್ನೆ ಪೂಜಾ ಕಾರ್ಯಗಳೊಂದಿಗೆ ಆರಂಭವಾಗಿದೆ. ಆದರೆ ಈ ಸಿನಿಮಾಗೆ ಮೊದಲ ಆಯ್ಕೆ ರಶ್ಮಿಕಾ ಆಗಿರಲಿಲ್ಲ. ಸಮಂತಾ ಅವರ ಬಳಿ ಈ ಚಿತ್ರದ ಆಫರ್ ಇತ್ತು. ಕೆಲ ಅನಿವಾರ್ಯ ಕಾರಣ, ಬ್ಯುಸಿ ಶೆಡ್ಯೂಲ್ ಹಿನ್ನೆಲೆ ಅಂತಿಮವಾಗಿ ಚಿತ್ರಕ್ಕೆ ರಶ್ಮಿಕಾ ಆಯ್ಕೆಯಾಗಿದ್ದಾರೆ.
ವಾಸ್ತವವಾಗಿ ಡ್ರೀಮ್ ವಾರಿಯರ್ಸ್ ಪಿಕ್ಚರ್ಸ್ 2021ರಲ್ಲಿ ನಟಿ ಸಮಂತಾ ರುತ್ ಪ್ರಭು ಜೊತೆ ಸಿನಿಮಾ ಘೋಷಿಸಿತ್ತು. ಆದರೆ ಈವರೆಗೂ ಅದರ ಬಗ್ಗೆ ಯಾವುದೇ ಅಪ್‌ಡೇಟ್ ನೀಡಿಲ್ಲ. ಡ್ರೀಮ್ ವಾರಿಯರ್ಸ್ ಪಿಕ್ಚರ್ಸ್ ನಿನ್ನೆ ರಶ್ಮಿಕಾರ ಜೊತೆ ರೈನ್ಬೋ ಚಿತ್ರ ಘೋಷಿಸಿದೆ. ರಶ್ಮಿಕಾಗೆ ಜೋಡಿಯಾಗಿ ದೇವ್ ಮೋಹನ್ ಬಣ್ಣ ಹಚ್ಚಲಿದ್ದಾರೆ. ತಮಿಳು ನಿರ್ದೇಶಕ ಶಂತರುಬನ್ ಈ ಚಿತ್ರ ನಿರ್ದೇಶಿಸಲಿದ್ದಾರೆ. ಸಮಂತಾ ಸ್ಥಾನಕ್ಕೆ ರಶ್ಮಿಕಾ ಆಯ್ಕೆಯಾಗಿದ್ದಾರೆ.