ಹಿಂದಿ ಚಿತ್ರರಂಗದಲ್ಲಿ ಈವರೆಗೆ ಮೂಡಿ ಬಂದಿರುವ ಜನಪ್ರಿಯ ಸಾಹಸ ಚಿತ್ರಗಳ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮುಂದಿನ ಬಹು ನಿರೀಕ್ಷಿತ ಆ್ಯಕ್ಷನ್ ಚಿತ್ರ 'ಸಿಂಗಮ್ ಎಗೈನ್'. ಚಿತ್ರದ ಹೊಸ ಅಪ್ಡೇಟ್ ಹೊರಬಿದ್ದಿದ್ದು, ಪ್ರೇಕ್ಷಕರು ಕುತೂಹಲ ವ್ಯಕ್ತಪಡಿಸಿದ್ದಾರೆ.
ರಣ್ವೀರ್ ಸಿಂಗ್ ಫಸ್ಟ್ ಲುಕ್: ಇತ್ತೀಚೆಗಷ್ಟೇ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಅವರ ಫಸ್ಟ್ ಲುಕ್ ಪೋಸ್ಟರ್ ಅನಾವರಣಗೊಳಿಸಲಾಗಿತ್ತು. 'ಸಿಂಗಮ್ ಎಗೈನ್' ಸಿನಿಮಾದಲ್ಲಿ ಲೇಡಿ ಪೊಲೀಸ್ ಆಫೀಸರ್ ಶಕ್ತಿ ಶೆಟ್ಟಿ ಪಾತ್ರ ನಿರ್ವಹಿಸುತ್ತಿರುವುದನ್ನು ಚಿತ್ರತಂಡ ಬಹಿರಂಗಪಡಿಸಿತ್ತು. ಇದೀಗ ದೀಪಿಕಾ ಪಡುಕೋಣೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗಾಗಿ ಚಿತ್ರದಿಂದ ಹೊಸ ಪೋಸ್ಟರ್ ಹಂಚಿಕೊಂಡಿದ್ದಾರೆ.
ಪತಿಯ ಪೋಸ್ಟರ್ ಹಂಚಿಕೊಂಡ ದೀಪಿಕಾ ಪಡುಕೋಣೆ:ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪತಿ ರಣ್ವೀರ್ ಸಿಂಗ್ ಅವರ ಫಸ್ಟ್ ಲುಕ್ ಅನ್ನು ಹಂಚಿಕೊಂಡಿಕೊಂಡಿದ್ದಾರೆ. 'ಸಿಂಗಮ್ ಎಗೈನ್ ' ಚಿತ್ರಕ್ಕೆ ಸಿಂಬಾ ಆಗಿ ಪ್ರವೇಶಿಸಿರುವುದಾಗಿ ನಿರ್ದೇಶಕ ರೋಹಿತ್ ಶೆಟ್ಟಿ ತಿಳಿಸಿದ್ದಾರೆ. ರಣ್ವೀರ್ ಸಿಂಗ್ ಅವರು ಅಕ್ಷಯ್ ಕುಮಾರ್ ಮತ್ತು ಅಜಯ್ ದೇವಗನ್ ಸೇರಿದಂತೆ ಹಲವರ ಜೊತೆ ತೆರೆ ಹಂಚಿಕೊಂಡಿದ್ದಾರೆ.
'ಸಿಂಗಮ್ ಎಗೈನ್' ಕಾಸ್ಟ್: ಬಹು ನಿರೀಕ್ಷಿತ ಆ್ಯಕ್ಷನ್ ಪ್ಯಾಕ್ಡ್ ಸಿನಿಮಾದಲ್ಲಿ ಅಕ್ಷಯ್ ಕುಮಾರ್, ಅಜಯ್ ದೇವ್ಗನ್, ದೀಪಿಕಾ ಪಡುಕೋಣೆ, ರಣ್ವೀರ್ ಸಿಂಗ್, ಟೈಗರ್ ಶ್ರಾಫ್ ನಟಿಸುತ್ತಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ ಚಿತ್ರದಲ್ಲಿ ಕರೀನಾ ಕಪೂರ್ ಖಾನ್ ಮತ್ತು ವಿಕ್ಕಿ ಕೌಶಲ್ ಅವರೂ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಆದ್ರೆ ಚಿತ್ರದಿಂದ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಈವರೆಗೆ ದೀಪಿಕಾ ಪಡುಕೋಣೆ, ಟೈಗರ್ ಶ್ರಾಫ್, ಇಂದು ರಣ್ವೀರ್ ಸಿಂಗ್ ಅವರ ಮೊದಲ ನೋಟ ಅನಾವರಣಗೊಂಡಿದೆ.