ಬಾಲಿವುಡ್ ಪ್ರತಿಭಾನ್ವಿತ ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣ್ವೀರ್ ಸಿಂಗ್ ಮಾದರಿ ದಂಪತಿಯಾಗಿ ಗುರುತಿಸಿಕೊಂಡಿದ್ದಾರೆ. ಸಾರ್ವಜನಿಕವಾಗಿ ಪ್ರೀತಿ ವ್ಯಕ್ತಪಡಿಸುವುದರಿಂದ ಈ ಸ್ಟಾರ್ ದಂಪತಿ ಎಂದೂ ಹಿಂದೆ ಸರಿಯಲ್ಲ. ಅಪ್ಪುಗೆ, ಚುಂಬನ, ಕ್ಯಾಮರಾಗಳಿಗೆ ಒಟ್ಟಾಗಿ ಪ್ರೀತಿ ಪೂರ್ವಕವಾಗಿ ಪೋಸ್ ಕೊಡುವ ವಿಡಿಯೋ, ಫೋಟೋಗಳು ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ಅಭಿಮಾನಿಗಳ ಗಮನ ಸೆಳೆದಿದೆ.
ಇತ್ತೀಚೆಗೆ ಟೈಮ್ ನಿಯತಕಾಲಿಕದ ಮುಖಪುಟದಲ್ಲಿ ಕಾಣಿಸಿಕೊಂಡಿದ್ದ ಬಾಲಿವುಡ್ ಬಹುಬೇಡಿಕೆ ತಾರೆ ದೀಪಿಕಾ ಪಡುಕೋಣೆ, ಸಂದರ್ಶನದಲ್ಲಿ ತಮ್ಮ ಸಂಗಾತಿ ರಣ್ವೀರ್ ಸಿಂಗ್ ಅವರಿಂದ ಅನಿರೀಕ್ಷಿತ ಭೇಟಿಯ ಸರ್ಪ್ರೈಸ್ ಸ್ವೀಕರಿಸಿದರು. ದೀಪಿಕಾ ಈ ಅನಿರೀಕ್ಷಿತ ಭೇಟಿಯನ್ನು ಕಾಕತಾಳಿಯ ಎಂದು ಸರಳವಾಗಿ ಬಣ್ಣಿಸಿದರು. ಸಂದರ್ಶನ ನಡೆಯುತ್ತಿದ್ದ ಪ್ರದೇಶದಲ್ಲೇ ರಣ್ವೀರ್ ಸಿಂಗ್ ಚಿತ್ರೀಕರಣ ನಡೆಸುತ್ತಿದ್ದರು. ಹಾಗಾಗಿ ಪತ್ನಿಗೆ ಸರ್ಪ್ರೈಸ್ ಕೊಡಲೆಂದು ಬಂದೆ ಎಂದು ನಟ ರಣ್ವೀರ್ ಸಿಂಗ್ ತಿಳಿಸಿದ್ದಾರೆ. ಪತಿಯ ಆಗಮನಕ್ಕೆ ನಟಿ ಸಂತಸ ವ್ಯಕ್ತಪಡಿಸಿದರು. ನಂತರ ಸಂದರ್ಶನದ ನಡೆಯುತ್ತಿದ್ದ ಸ್ಥಳದಲ್ಲೇ ಪರಸ್ಪರ ಚುಂಬಿಸಿದರು. ನಂತರ ನಟ ರಣ್ವೀರ್ ಅಲ್ಲಿಂದ ನಿರ್ಗಮಿಸಿದರು. ಈ ಕಿಸ್ಸಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ವೈರಲ್ ಆಗುತ್ತಿರುವ ರಣ್ವೀರ್ ಅವರ ಅನಿರೀಕ್ಷಿತ ಭೇಟಿಯ ವಿಡಿಯೋ ತುಣುಕಿನಲ್ಲಿ, ದೀಪಿಕಾ ಅವರಿಗೆ ಸಂದರ್ಶಕರು ಮದುವೆಯ ಬಗ್ಗೆ ಪ್ರಶ್ನೆ ಕೇಳುತ್ತಿರುತ್ತಾರೆ. ಆ ಕೂಡಲೇ ಪತಿ ರಣ್ವೀರ್ ಆಗಮನ ಆಗುತ್ತದೆ. ಪತ್ನಿಯನ್ನು ಮಾತನಾಡಿಸಿಕೊಂಡು ನಟ ಹೊರಡಲು ಮುಂದಾಗುತ್ತಾರೆ. ಆಗ ದೀಪಿಕಾ ಪಡುಕೋಣೆ, ಎಂತಹ ಕಾಕತಾಳಿಯ ಎಂದು ಹೇಳುತ್ತಾರೆ.
ಮದುವೆ ಬಗ್ಗೆ ಪ್ರಶ್ನೆ ಎತ್ತಿದ ಹೊತ್ತಲ್ಲಿ ಗಂಡನ ಆಗಮನದ ಕುರಿತು ನಟಿ ಹೀಗೆ ಹೇಳುತ್ತಾರೆ. ಸಂದರ್ಶಕರನ್ನು ಸಂದರ್ಶನ ಮುಂದುವರಿಸುವಂತೆ ದೀಪಿಕಾ ಕೇಳಿಕೊಳ್ಳುತ್ತಾರೆ. ಆಗ ಮದುವೆಯಾಗಿ ಎಷ್ಟು ದಿನವಾಗಿದೆ ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಪ್ರತಿಕ್ರಿಯಿಸಿದ ನಟಿ, ಮದುವೆಯಾಗಿ ನಾಲ್ಕೂವರೆ ವರ್ಷಗಳಾಗಿವೆ, ಆದರೆ ರಣವೀರ್ ಅವರು 10-11 ವರ್ಷಗಳಿಂದ ನನ್ನೊಟ್ಟಿಗೆ ಇದ್ದಾರೆ ಎಂದು ಹೇಳಿದರು. ದಂಪತಿಗಳು ಮದುವೆ ಬಗ್ಗೆ ಮಾತನಾಡುವಾಗ ಕೈ ಕೈ ಹಿಡಿದುಕೊಂಡರು. ನಂತರ ದೀಪಿಕಾ "ನಾವು ಏನು ಮಾಡುತ್ತಿದ್ದೇವೆ?" ಎಂದು ಪತಿಯಲ್ಲಿ ಪ್ರಶ್ನಿಸಿದರು. ಅದಕ್ಕೆ ರಣ್ವೀರ್, "ನಾನು ಹಾಯ್ ಹೇಳಲು ಬಂದಿದ್ದೇನೆ" ಎಂದು ಪ್ರತಿಕ್ರಿಯಿಸಿದರು.