ಹೈದರಾಬಾದ್: ನಟ ರಣಬೀರ್ ಕಪೂರ್- ನಟಿ ರಶ್ಮಿಕಾ ಮಂದಣ್ಣ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಅನಿಮಲ್' ಟ್ರೈಲರ್ ಬಿಡುಗಡೆಯಾಗಿದೆ. ಗ್ಯಾಂಗ್ಸ್ಟರ್- ಆ್ಯಕ್ಷನ್- ಥ್ರಿಲ್ಲರ್ ಜೊತೆಗೆ ಇದು ತಂದೆ ಮಗನ ಬಾಂಧವ್ಯದ ಕಥೆಯನ್ನು ಹೊಂದಿರುವ ಸಿನಿಮಾವಾಗಿದೆ. ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ಅನಿಮಲ್ ಡಿಸೆಂಬರ್ 1ರಂದು ಬಿಡುಗಡೆಗೆ ಸಜ್ಜಾಗಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರದಲ್ಲಿ ಅನಿಲ್ ಕಪೂರ್, ಬಾಬಿ ಡಿಯೋಲ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.
'ಅನಿಮಲ್' ಟ್ರೈಲರ್ ಆರಂಭದಲ್ಲಿ ರಣಬೀರ್, ಆವೇಶಭರಿತ ಮತ್ತು ಪ್ರತೀಕಾರ ತೀರಿಸಿಕೊಳ್ಳುವ ಗ್ಯಾಂಗ್ಸ್ಟರ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಮೂರು ನಿಮಿಷದ ಟ್ರೈಲರ್ನಲ್ಲಿ ರಣಬೀರ್ ಕಪೂರ್ ಪಾತ್ರ ಚಿತ್ರದಲ್ಲಿ ಯಾವೆಲ್ಲಾ ರೀತಿ ಮಾರ್ಪಾಡು ಆಗುತ್ತದೆ ಎಂಬುದನ್ನು ಕಾಣಬಹುದಾಗಿದೆ. ರಕ್ತಸಿಕ್ತ ದೃಶ್ಯಗಳೊಂದಿಗೆ ಚಾಕು, ಕೊಡಲಿ, ಮಷಿನ್ ಗನ್ ಹಿಡಿದು ಆಕ್ರೋಶ ಭರಿತವಾಗಿ ನಾಯಕ ನಟ ಕಂಡಿದ್ದಾರೆ. ಈ ಹಿಂದೆದಿಗಿಂತಲೂ ಮತ್ತಷ್ಟು ರಗಡ್ ಲುಕ್ನಲ್ಲಿ ಅವರು ಸದ್ದು ಮಾಡಿದ್ದಾರೆ.
ಟ್ರೈಲರ್ನಲ್ಲಿ ರಣಬೀರ್ ಕಪೂರ್ ಒಂದು ಕಡೆ ಹಿಂಸಾತ್ಮಕವಾಗಿ ಕಂಡು ಬಂದರೆ, ಮತ್ತೊಂದು ಕಡೆ ಮುಗ್ದನ ಪಾತ್ರದಲ್ಲಿ ಕಂಡು ಬಂದಿದ್ದಾರೆ. ಇನ್ನು ಚಿತ್ರದ ಜೀವಾಳ ತಂದೆ ಮಗನ ಭಾವನಾತ್ಮಕ ಸಂಬಂಧವನ್ನು ಹೊಂದಿದೆ ಎಂಬುದನ್ನು ಸ್ಪಷ್ಟಪಡಿಸಿದೆ. ತಂದೆ ರಕ್ಷಣೆಗಾಗಿ ಮಗ ಹೋರಾಡುವ ಮತ್ತು ತಂದೆಯನ್ನು ಅಗಾಧವಾಗಿ ಪ್ರೀತಿಸಲು ನಡೆಸುವ ಹೋರಾಟವನ್ನು ಬಿಂಬಿಸಿದೆ. ಇದರ ಜೊತೆಗೆ ಸಿನಿಮಾ ಪಕ್ಕಾ ಸಾಹಸ ಚಿತ್ರ ಎಂಬುದು ದೃಶ್ಯದಲ್ಲಿದೆ. ಇನ್ನು ನಟಿ ರಶ್ಮಿಕಾ ಮಂದಣ್ಣ ಅಭಿನಯಕ್ಕೆ ಚಿತ್ರದಲ್ಲಿ ಹೊಸ ಅವಕಾಶ ದೊರಕಿರುವುದು ಟ್ರೈಲರ್ನಲ್ಲಿದೆ.