ಬಾಲಿವುಡ್ ಸ್ಟಾರ್ ರಣ್ಬೀರ್ ಕಪೂರ್ ಕಾರ್ಯಕ್ರಮವೊಂದರಲ್ಲಿ ಬಿಸಿ ಬಿಸಿ ಕಾಫಿ ಚೆಲ್ಲಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ. ಸ್ಟಾರ್ ನಟ ಸ್ವತಃ ಕಾಫಿ ಚೆಲ್ಲಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದಕ್ಕೆ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಶುಕ್ರವಾರ ಸಂಜೆ ಬ್ರಹ್ಮಾಸ್ತ್ರ ಸ್ಟಾರ್ ರಣ್ಬೀರ್ ಕಪೂರ್ ತಾಯಿ ಮತ್ತು ಹಿರಿಯ ನಟಿ ನೀತು ಕಪೂರ್ ಅವರೊಂದಿಗೆ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಇದ್ದರು. ವೇದಿಕೆಯಲ್ಲಿ ರಣಬೀರ್ ಕಪೂರ್ ಉಪಸ್ಥಿತರಿದ್ದರು. ಕೈಯಲ್ಲಿ ಬಿಸಿ ಕಾಫಿ ಕಪ್ ಹಿಡಿದು ಗಣ್ಯರೊಂದಿಗೆ, ಪ್ರೇಕ್ಷಕರೊಂದಿಗೆ ಸಂವಾದ ನಡೆಸುತ್ತಿದ್ದರು. ಮಾತುಕತೆಯಲ್ಲಿ ತೊಡಗಿರುವಾಗ, ರಣ್ಬೀರ್ ಕಪೂರ್ ಒಂದು ಕೈಯಲ್ಲಿದ್ದ ಮೈಕ್ಅನ್ನು ಕಪ್ಗೆ ತಾಗಿಸಿದ್ದಾರೆ. ಹೀಗಾಗಿ ಕಪ್ ಮೇಲಿನ ನಿಯಂತ್ರಣವನ್ನು ಕಳೆದುಕೊಂಡರು. ಆಗ ಕಾಫಿ ಅವರ ಪ್ಯಾಂಟ್ ಮೇಲೆ ಚೆಲ್ಲಿತು.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ರಣ್ಬೀರ್ ತಮ್ಮ ಪ್ಯಾಂಟ್ ಮೇಲೆ ಬಿಸಿ ಕಾಫಿಯನ್ನು ಚೆಲ್ಲಿಕೊಂಡ ತಕ್ಷಣವೇ ಜಿಗಿಯುವುದನ್ನು ಕಾಣಬಹುದು. ಶೀಘ್ರದಲ್ಲೇ ಸಹಾಯಕ್ಕೆ ಕರೆಯಲಾಯಿತು. ಈವೆಂಟ್ನಲ್ಲಿ ರಣ್ಬೀರ್ ಸಂಪೂರ್ಣ ಬ್ಲ್ಯಾಕ್ ಡ್ರೆಸ್ನಲ್ಲಿ ಕಾಣಿಸಿಕೊಂಡರು. ಸ್ಕಿನ್ಕೇರ್ ಬುಕ್ ಒಂದನ್ನು ಪ್ರಚಾರ ಮಾಡಲು ರಣ್ಬೀರ್ ಮತ್ತು ನೀತು ಒಟ್ಟಿಗೆ ಬಂದಿದ್ದರು. ರಣ್ಬೀರ್ ಸಂಪೂರ್ಣ ಕಪ್ಪು ಉಡುಪಿನಲ್ಲಿ ಕಾಣಿಸಿಕೊಂಡರೆ, ನೀತು ಕಪೂರ್ ನೇರಳೆ ಬಣ್ಣದ ಉಡುಪಿನಲ್ಲಿ ಅದ್ಭುತವಾಗಿ ಕಾಣುತ್ತಿದ್ದರು.
ಇದನ್ನೂ ಓದಿ:32 ಕೋಟಿ ರೂ. ಬಾಚಿಕೊಂಡ ಐಶ್ವರ್ಯಾ ರೈ ಸಿನಿಮಾ: 'ಪೊನ್ನಿಯಿನ್ ಸೆಲ್ವನ್ 2'ಕ್ಕೆ ಭಾರಿ ಮೆಚ್ಚುಗೆ
ಯೇ ಜವಾನಿ ಹೈ ದಿವಾನಿ ಚಿತ್ರದ ನಟ ಇದೀಗ ಅವರ ಮುಂಬರುವ ಬಹುನಿರೀಕ್ಷಿತ ಚಲನಚಿತ್ರ 'ಅನಿಮಲ್' ಶೂಟಿಂಗ್ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರು ಜನವರಿ 1 ರಂದು ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡಿದ್ದರು. ರಣ್ಬೀರ್ ಕಪೂರ್ ಸಿಗರೇಟ್ ಸೇದುತ್ತಾ, ಯಾರನ್ನೋ ದಿಟ್ಟಿಸುತ್ತಿರುವುದನ್ನು ಈ ಪೋಸ್ಟರ್ನಲ್ಲಿ ಕಾಣಬಹುದು. ರಕ್ತಸಿಕ್ತವಾದ ಕೊಡಲಿ ಹಿಡಿದಿದ್ದು, ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಪೋಸ್ಟರ್ ಜೊತೆಗೆ ಚಿತ್ರದ ಬಿಡುಗಡೆ ದಿನಾಂಕ ಕೂಡ ಬಹಿರಂಗ ಪಡಿಸಿದ್ದಾರೆ. ಇದೇ ಸಾಲಿನ ಆಗಸ್ಟ್ 11ರಂದು ಸಿನಿಮಾ ಬಿಡುಗಡೆ ಆಗಲಿದೆ. 2022ರ ಏಪ್ರಿಲ್ನಲ್ಲೇ ಚಿತ್ರ ಸೆಟ್ಟೇರಿತ್ತು. ಶೂಟಿಂಗ್ ಕೊನೆಯ ಹಂತದಲ್ಲಿದ್ದು, ಶೀಘ್ರವೇ ಪೋಸ್ಟ್ ಪ್ರೊಡಕ್ಷನ್ ಹಂತ ತಲುಪಲಿದೆ. ಅನಿಲ್ ಕಪೂರ್, ಬಾಬಿ ಡಿಯೋಲ್ ಮತ್ತು ತೃಪ್ತಿ ಡಿಮ್ರಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ರಣ್ಬೀರ್ ಕಪೂರ್ ಜೊತೆ ತೆರೆ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಜೂ. 1ರಂದು ಕಿಚ್ಚ ಸುದೀಪ್ ಸಿನಿಮಾ ಲಾಂಚ್: ಪ್ರಚಾರದ ನಡುವೆಯೇ ಅಭಿಮಾನಿಗಳಿಗೆ ಗುಡ್ನ್ಯೂಸ್
2022ರ ಏಪ್ರಿಲ್ನಲ್ಲಿ ದಾಂಪತ್ಯ ಜೀವನ ಆರಂಭಿಸಿರುವ ರಣ್ಬೀರ್ ಕಪೂರ್ ಮತ್ತು ಆಲಿಯಾ ಭಟ್ ಕಳೆದ ನವೆಂಬರ್ನಲ್ಲಿ ಪೋಷಕರಾಗಿ ಭಡ್ತಿ ಪಡೆದಿದ್ದಾರೆ. ಪುತ್ರಿ ಆರೈಕೆಯ ಜೊತೆ ಜೊತೆಗೆ ಸಿನಿಮಾ ಕೆಲಸಗಳನ್ನೂ ಪೂರ್ಣಗೊಳಿಸುತ್ತಿದ್ದಾರೆ ಈ ತಾರಾ ದಂಪತಿ.