ಲವ್ ರಂಜನ್ ನಿರ್ದೇಶನದ ಅವರ ತೂ ಜೂಟಿ ಮೇ ಮಕ್ಕರ್ ಸಿನಿಮಾದಲ್ಲಿ ಮೊದಲ ಬಾರಿಗೆ ರಣ್ಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ತೆರೆ ಹಂಚಿಕೊಂಡಿದ್ದಾರೆ. ಸಿನಿಮಾ ಬಿಡುಗಡೆಯ ಸಮೀಪದಲ್ಲಿದ್ದು (ಮಾರ್ಚ್ 8), ಚಿತ್ರತಂಡ ಮತ್ತು ಚಿತ್ರದ ಪ್ರಮುಖ ಜೋಡಿ ತಮ್ಮ ಸಿನಿಮಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಆದರೆ ರಣ್ಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಹೆಚ್ಚಾಗಿ ಪ್ರತ್ಯೇಕವಾಗಿ ಚಿತ್ರದ ಪ್ರಚಾರ ಮಾಡುತ್ತಿದ್ದಾರೆ.
ತೂ ಜೂಟಿ ಮೇ ಮಕ್ಕರ್ ಸಿನಿಮಾ ಪ್ರಚಾರದ ಸಮಯದಲ್ಲಿ ರಣ್ಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಹೆಚ್ಚಾಗಿ ಪ್ರತ್ಯೇಕವಾಗಿ ಕಾಣಿಸಿಕೊಂಡರು. ಈ ಬಗ್ಗೆ ಅಭಿಮಾನಿಗಳಲ್ಲಿ, ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಯಿತು. ಶ್ರದ್ಧಾ ಅವರೊಂದಿಗಿನ ಚಿತ್ರದ ಪ್ರಚಾರದ ಬಗ್ಗೆ ರಣ್ಬೀರ್ ಕಪೂರ್ ಪತ್ನಿ, ನಟಿ ಆಲಿಯಾ ಭಟ್ ಹೆಚ್ಚು ಸಂತೋಷವಾಗಿಲ್ಲ, ರಣ್ಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಒಟ್ಟಾಗಿ ಸಿನಿಮಾ ಪ್ರಚಾರ ಮಾಡುವುದು ನಟಿ ಆಲಿಯಾ ಭಟ್ ಅವರಿಗೆ ಇಷ್ಟ ಇಲ್ಲ ಎಂದು ವದಂತಿಗಳು ಹರಡಿತ್ತು. ಈ ಬಗ್ಗೆ ನಟ ರಣ್ಬೀರ್ ಕಪೂರ್ ಅವರಲ್ಲಿ ಪ್ರಶ್ನಿಸಿದಾಗ, ಇವು ಕೇವಲ ಊಹಾಪೋಹಗಳು, ಆಧಾರರಹಿತ ಎಂದು ತಿಳಿಸಿದ್ದಾರೆ.
ಆಲಿಯಾ ನನಗೆ ಅಂತಹ ಯಾವುದೇ ಸೂಚನೆಗಳನ್ನು ನೀಡಿಲ್ಲ. ವದಂತಿ, ವಿವಾದವನ್ನು ಸೃಷ್ಟಿಸಲು ಪ್ರಯತ್ನಿಸಲಾಗುತ್ತಿದೆ ಎಂದು ರಣ್ಬೀರ್ ಕಪೂರ್ ಹೇಳಿದರು. ಇನ್ನೂ ತಮ್ಮ ಪ್ರತ್ಯೇಕ ಪ್ರಚಾರದ ಕಾರಣವನ್ನು ಬಹಿರಂಗಪಡಿಸಿದ ರಣ್ಬೀರ್ ಕಪೂರ್, ಚಿತ್ರದ ಪ್ರಮುಖ ಜೋಡಿಯ ಬಗ್ಗೆ ಪ್ರೇಕ್ಷಕರಲ್ಲಿ ಇರುವ ಕುತೂಹಲ ಹಾಗೇ ಉಳಿದುಕೊಳ್ಳಲು ಈ ರೀತಿ ಪ್ರತ್ಯೇಕವಾಗಿ ಪ್ರಚಾರ ಮಾಡಲಾಗುತ್ತಿದೆ ಎಂದರು.