ಜೈಲರ್ ಯಶಸ್ಸಿನಲೆಯಲ್ಲಿ ತೇಲುತ್ತಿರುವ ಭಾರತೀಯ ಚಿತ್ರರಂಗದ ಸುಪ್ರಸಿದ್ಧ, ಹಿರಿಯ ನಟ ರಜನಿಕಾಂತ್ ಅವರ ಮುಂದಿನ ಬಹುನಿರಿಕ್ಷಿತ ಸಿನಿಮಾ ತಲೈವರ್ 170. ತಾತ್ಕಾಲಿಕವಾಗಿ ತಲೈವರ್ 170 ಎಂದು ಹೆಸರಿಸಲಾಗಿರುವ ಮುಂದಿನ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾದಲ್ಲಿ ಬಾಹುಬಲಿ ಸ್ಟಾರ್ ರಾಣಾ ದಗ್ಗುಬಾಟಿ ನಟಿಸಲಿದ್ದಾರೆ.
ರಾಣಾ ದಗ್ಗುಬಾಟಿ ಎಂಟ್ರಿ: ಕಳೆದೆರಡು ದಿನಗಳಿಂದ ಚಿತ್ರ ತಯಾರಕರು ಕಾಸ್ಟ್ ಹಾಗೂ ಸಿಬ್ಬಂದಿ ಹೆಸರನ್ನು ಬಹಿರಂಗಪಡಿಸುತ್ತಿದ್ದಾರೆ. ಇಂದು (ಅಕ್ಟೋಬರ್ 3) ತಲೈವರ್ 170 ಸಿನಿಮಾ ನಿರ್ಮಾಣ ಮಾಡುತ್ತಿರುವ ದಕ್ಷಿಣ ಚಿತ್ರರಂಗದ ಪ್ರತಿಷ್ಟಿತ ಚಲನಚಿತ್ರ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್, ಚಿತ್ರತಂಡಕ್ಕೆ ಸೌತ್ ಸಿನಿಮಾ ರಂಗದ ಸ್ಟಾರ್ ಹೀರೋ ರಾಣಾ ದಗ್ಗುಬಾಟಿ ಅವರನ್ನು ಸ್ವಾಗತಿಸಿದ್ದಾರೆ. ಸಾಮಾಜಿಕ ಜಾಲತಾಣಲ್ಲಿ ಬಾಹುಬಲಿ ನಟನ ಎಂಟ್ರಿ ಕುರಿತು ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ (ಹಿಂದಿನ ಟ್ವಿಟರ್)ನಲ್ಲಿ ಲೈಕಾ ಪ್ರೊಡಕ್ಷನ್ಸ್, "ತಲೈವರ್ 170 ತಂಡ ರಾಣಾ ದಗ್ಗುಬಾಟಿ ಅವರ ಸೇರ್ಪಡೆಯಿಂದ ತನ್ನ ವರ್ಚಸ್ಸು ಹೆಚ್ಚಿಸಿಕೊಂಡಿದೆ'' ಎಂದು ಬರೆದುಕೊಂಡಿದೆ. ಇತ್ತೀಚೆಗಷ್ಟೇ ಜೈ ಭೀಮ್ ನಿರ್ದೇಶಕ ಟಿ.ಜೆ ಜ್ಞಾನವೆಲ್ (Gnanavel) ಸಿನಿಮಾ ನಿರ್ದೇಶಿಸುವುದು ಖಚಿತವಾಗಿದೆ. ಅಸಾಧಾರಣ ನಿರ್ದೇಶನ ಶೈಲಿಗೆ ಹೆಸರು ವಾಸಿಯಾಗಿರುವ ಟಿಜೆ ಜ್ಞಾನವೆಲ್ ಬಳಿಕ ರಾಣಾ ದಗ್ಗುಬಾಟಿ ಅವರ ಎಂಟ್ರಿ ಆಗಿದೆ. ಈ ಮೂಲಕ ತಲೈವರ್ 170 ತನ್ನ ದಿ ಬೆಸ್ಟ್ ಅನ್ನು ಪ್ರೇಕ್ಷಕರಿಗೆ ಕೊಡಲು ಸಜ್ಜಾಗಿದೆ.