ಕನ್ನಡ ಚಿತ್ರರಂಗದಲ್ಲಿ ಮೋಹಕತಾರೆ ರಮ್ಯಾ ಬಹುಬೇಡಿಕೆ ನಟಿಯಾಗಿ ಮಿಂಚಿದ್ದರು. ಬಳಿಕ ರಾಜಕಾರಣದಲ್ಲಿ ತೊಡಗಿಕೊಂಡರು. 2012ರಲ್ಲಿ ಅನಿರೀಕ್ಷಿತವಾಗಿ ರಾಜಕೀಯ ರಂಗಕ್ಕೆ ಎಂಟ್ರಿ ಕೊಟ್ಟ ರಮ್ಯಾ ರೆಬೆಲ್ ಸ್ಟಾರ್ ಅಂಬರೀಶ್ ಬೆಂಬಲದಿಂದ ಮಂಡ್ಯದಲ್ಲಿ ಗೆದ್ದು ಸಂಸದರಾದರು. ಆದರೆ, ಆ ನಂತರ ರಮ್ಯಾ ಆ ಕಡೆ ಹೆಜ್ಜೆ ಹಾಕಲಿಲ್ಲ ಅನ್ನೋದು ಮಂಡ್ಯ ಜನತೆಯ ಬೇಸರ. ಹೀಗಾಗಿ ಎರಡನೇ ಬಾರಿ ಚುನಾವಣಾ ಅಖಾಡಕ್ಕೆ ರಮ್ಯಾ ಧುಮುಕಿದಾಗ ಮಂಡ್ಯ ಮತದಾರರು ರಮ್ಯಾರಿಗೆ ಸೋಲಿನ ಪಾಠ ಕಲಿಸಿದರು. ಬಳಿಕ ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದ ರಮ್ಯಾ ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ಮುಖ್ಯಸ್ಥೆಯಾಗಿ ಕೆಲ ಕಾಲ ಕಾರ್ಯ ನಿರ್ವಹಿಸಿದರು.
ರಮ್ಯಾ ಮೇಲೆ ಮಂಡ್ಯ ಜನತೆಗೆ ಪ್ರೀತಿ ಇತ್ತು. ನಮ್ಮ ಮನೆ ಮಗಳು ಅನ್ನುವ ಭಾವನೆ ಬಹುತೇಕರಲ್ಲಿ ಇತ್ತು. ರಮ್ಯಾ ಮಂಡ್ಯದಲ್ಲಿ ಮನೆಯನ್ನೂ ಮಾಡಿಕೊಂಡಿದ್ದರು. ಹೀಗಾಗಿ, ಇಂದಲ್ಲ ನಾಳೆ ರಮ್ಯಾ ನಮ್ಮ ಕಷ್ಟ ಸುಖಕ್ಕೆ ಆಗಬಹುದೆಂಬ ವಿಶ್ವಾಸ ಮಂಡ್ಯದವರಲ್ಲಿ ಇತ್ತು.
2018ರಲ್ಲಿ ನಟ ಅಂಬರೀಶ್ ಸಾವಿಗೆ ಭಾರತದ ಅಷ್ಟ ದಿಕ್ಕುಗಳಿಂದಲೂ ಸಂತಾಪ ಸೂಚಿಸಲಾಯ್ತು. ಯಾವ್ಯಾವುದೋ ಮೂಲೆಯಲ್ಲಿದ್ದವರೂ ಕೂಡ ಓಡೋಡಿ ಬಂದು ಅಂಬರೀಶ್ ಅವರ ಅಂತಿಮ ದರ್ಶನ ಪಡೆದರು. ಚಿತ್ರರಂಗದ ದಿಗ್ಗಜರೆಲ್ಲಾ ಅಂಬಿ ಅಂತಿಮ ದರ್ಶನ ಪಡೆದ್ರು. ಅಷ್ಟು ದೂರದ ಸ್ವೀಡನ್ ದೇಶದಲ್ಲಿದ್ದ ದರ್ಶನ್ ಕೂಡಾ ತರಾತುರಿಯಿಂದ ಮರಳಿದ್ದರು. ಇನ್ನೂ ರಶ್ಮಿಕಾ ಮಂದಣ್ಣ ತಕ್ಷಣಕ್ಕೆ ಬರಲಾಗದೇ ಇದ್ದರೂ, ಅಂಬಿ ಸಮಾಧಿ ಸ್ಥಳಕ್ಕೆ ಬಂದು ನಮನ ಸಲ್ಲಿಸಿದ್ದರು. ಇದೆಲ್ಲದಕ್ಕೆ ಕಾರಣವಾಗಿರೋದು ಅಂಬಿಯ ವ್ಯಕ್ತಿತ್ವದಲ್ಲಿದ್ದ ಸ್ನೇಹಶೀಲತೆ ಮತ್ತು ಹೃದಯವಂತಿಕೆ.
ಆದರೆ, ಅಂಬಿ ಸಾವಿನ ಸುದ್ದಿ ತಿಳಿದು ಕೂಡ ಅಂತಿಮ ದರ್ಶನಕ್ಕೆ ಬಾರದ ರಮ್ಯಾ ಅದೆಷ್ಟೋ ದಿನಗಳ ನಂತರ ಟ್ವೀಟ್ ಮೂಲಕವೇ ಸಂತಾಪ ಸೂಚಿಸಿದ್ದರು. ಹೀಗಾಗಿ ಮಂಡ್ಯದಲ್ಲಿ ರಮ್ಯಾ ವಿರುದ್ಧ ಆಕ್ರೋಶದ ಧ್ವನಿ ಭುಗಿಲೆದ್ದಿತ್ತು. ಬಳಿಕ 2018ರ ಡಿಸೆಂಬರ್ನಲ್ಲಿ ರಾತ್ರೋ ರಾತ್ರಿ ನಟಿ ಮನೆ ಖಾಲಿ ಮಾಡಿದರು. ಅಲ್ಲಿಂದಾಚೆ ಮಂಡ್ಯ ಕಡೆ ರಮ್ಯಾ ಹೆಚ್ಚಾಗಿ ಹೋಗಿರಲಿಲ್ಲ. ಮಂಡ್ಯದ ಬಹುತೇಕ ಜನರು ಕೂಡಾ ರಮ್ಯಾ ಅವರನ್ನು ಮರಳಿ ಬನ್ನಿಯೆಂದು ಕರೆಯಲಿಲ್ಲ. ಆದರೆ, ಇದೀಗ ರಮ್ಯಾ ಮಂಡ್ಯಕ್ಕೆ ಭೇಟಿ ಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದ ಪ್ರಚಾರವನ್ನೂ ಮಾಡಿದ್ದಾರೆ. ಇದೇ ಸಮಯದಲ್ಲಿ ಅಂಬರೀಶ್ ಅಂತಿಮ ದರ್ಶನಕ್ಕೆ ಬರಲಿಲ್ಲವೇಕೆ ಎಂಬ ಪ್ರಶ್ನೆಗೆ ರಮ್ಯಾ ಉತ್ತರವನ್ನೂ ಕೊಟ್ಟಿದ್ದಾರೆ. ಜೊತೆಗೆ ಮದುವೆಗೆ ಗೌಡರ ಹುಡುಗನನ್ನು ಹುಡುಕಿ ಕೊಡಿ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಜಾಣ್ಮೆಯ ಉತ್ತರ ಕೊಟ್ಟಿದ್ದಾರೆ.
ಅಂಬರೀಶ್ ಅವರು ತೀರಿಕೊಂಡಾಗ ನನಗೆ ಟ್ಯೂಮರ್ ಬಂದಿತ್ತು. ಸರ್ಜರಿ ಮಾಡಿಸಿಕೊಂಡಿದ್ದೆ. ಹಾಗಾಗಿ ನಾನು ಆ ಸಮಯದಲ್ಲಿ ಬರಲು ಸಾಧ್ಯವಾಗಲಿಲ್ಲ. ಅದನ್ನು ಸೋಷಿಯಲ್ ಮೀಡಿಯಾದಲ್ಲೂ ಬರೆದುಕೊಂಡಿದ್ದೆ. ನನ್ನ ಸ್ವಭಾವ ಎಲ್ಲವನ್ನು ಹಂಚಿಕೊಳ್ಳುವುದಲ್ಲ. ಬೇರೆಯವರು ಕ್ಯಾಮರಾ ಮುಂದೆ ಬಂದು ಎಲ್ಲ ಹೇಳ್ತಾರೆ. ನಾನು ಚಿಕ್ಕವಳಿದ್ದಾಗಿನಿಂದಲೂ ನನ್ನ ಕೆಲಸದ ಬಗ್ಗೆ ಮಾತ್ರ ಮಾತನಾಡಿ ಅಭ್ಯಾಸ. ಯಾವುದೇ ವೈಯಕ್ತಿಕ ವಿಚಾರದ ಕುರಿತು ಮಾತನಾಡಲ್ಲ. ಆದರೆ ಇದರ ಬಗ್ಗೆ ಕೆಲವರು ಅಪಪ್ರಚಾರ ಮಾಡ್ತಾರೆ, ಆದ್ರೆ ನಾನು ತಲೆಕೆಡಿಸಿಕೊಳ್ಳಲ್ಲ. ಸರ್ಜರಿ ಆದ ಬಳಿಕ ನನಗೆ ಆಟೋಇಮ್ಯೂನ್ ಕಂಡಿಷನ್ ಕೂಡ ಆಯ್ತು. ಇದನ್ನೆಲ್ಲ ಹೇಳಿ ಸಿಂಪಥಿ ಪಡೆಯಲು ನನಗೆ ಇಷ್ಟ ಇಲ್ಲ. ಸದ್ಯ ನಾನು ರಾಜಕಾರಣಕ್ಕೆ ಬರುವ ಚಿಂತನೆ ನಡೆಸಿಲ್ಲ, ಮುಂದಿನ ದಿನಗಳಲ್ಲಿ ನೋಡೋಣ ಎಂದು ರಮ್ಯಾ ಹೇಳಿದ್ದಾರೆ.