ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿದ್ದವರು ರಮ್ಯಾ. ಮೋಹಕತಾರೆ ಎಂದೇ ಜನಪ್ರಿಯರಾಗಿರುವ ಇವರ ಬಗ್ಗೆ ಅಭಿಮಾನಿಗಳಿಗೆ ಕ್ರೇಜ್ ಇಂದಿಗೂ ಕಿಂಚಿತ್ತೂ ಕಡಿಮೆ ಆಗಿಲ್ಲ. ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗ ಹೊಂದಿರುವ ನಟಿ ಇವರು. ಸ್ಯಾಂಡಲ್ವುಡ್ ಕ್ವೀನ್ ಕೆಲ ಕಾಲ ಚಿತ್ರರಂಗದಿಂದ ದೂರವೇ ಉಳಿದಿದ್ದರು. ಇದೀಗ ಸಿನಿಮಾ ನಿರ್ಮಾಣ ಸಂಸ್ಥೆ ಮೂಲಕ ಕನ್ನಡ ಚಿತ್ರರಂಗಕ್ಕೆ ರಿಎಂಟ್ರಿ ಕೊಟ್ಟಿದ್ದಾರೆ. ಸಿನಿಮಾವೊಂದರಲ್ಲಿ ಅತಿಥಿ ಪಾತ್ರ ಕೂಡ ನಿರ್ವಹಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಸಕ್ರಿಯರು. ಹೀಗೆ ನಾನಾ ಕಾರಣಗಳಿಂದ ಸುದ್ದಿಯಲ್ಲಿರುವ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಹೊಸ ಪೋಸ್ಟ್ ಹಾಕಿದ್ದು, ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಸೂರ್ಯ ಜೊತೆ ಸ್ಯಾಂಡಲ್ವುಡ್ ಕ್ವೀನ್:ಸನ್ ಆಫ್ ಕೃಷ್ಣಮೂರ್ತಿ ಹಿಟ್ ಚಿತ್ರಗಳಲ್ಲೊಂದು. ಈ ಸಿನಿಮಾದಲ್ಲಿ ನಟ ಸೂರ್ಯ ಜೊತೆ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ತೆರೆಹಂಚಿಕೊಂಡಿದ್ದರು. ಸಿನಿಮಾ ಸೂಪ್ ಹಿಟ್ ಆಗಿ, ಬಹುಭಾಷೆಯಲ್ಲಿ ನಟಿ ಜನಪ್ರಿಯತೆ ಸಂಪಾದಿಸಿದರು. ರಮ್ಯಾ ಅವರು ಪ್ರಿಯಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಆ ಪಾತ್ರವನ್ನು ಜನರು ಇನ್ನೂ ಮರೆತಿಲ್ಲ. ಇದೀಗ ನಟಿ ರಮ್ಯಾ, ನಟ ಸೂರ್ಯ ಜೊತೆಗಿನ ಫೋಟೋ ಹಂಚಿಕೊಂಡು ಪಾತ್ರದ ಬಗ್ಗೆ, ಹಳೇ ದಿನಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನಟಿ ರಮ್ಯಾ ಪೋಸ್ಟ್: ಸನ್ ಆಫ್ ಕೃಷ್ಣಮೂರ್ತಿ ಸಿನಿಮಾ ಪೋಸ್ಟರ್ ಶೇರ್ ಮಾಡಿರುವ ರಮ್ಯಾ, ''ಈ ಚಿತ್ರದಲ್ಲಿ ಕೆಲಸ ಮಾಡಿದ್ದು, ಬಹಳ ಖುಷಿ ಕೊಟ್ಟಿದೆ. ನಾವು ಈ ಸಿನಿಮಾ ಚಿತ್ರೀಕರಿಸಿದ ವೇಳೆ ನನಗೆ 22 ವರ್ಷ. ನಾನು ಹಿಂದೆಂದೂ ಅನುಭವಿಸದಂತಹ ತೀವ್ರವಾದ ಭಾವನೆಗಳನ್ನು ಈ ಚಿತ್ರದಲ್ಲಿ ತೆರೆದಿಡಬೇಕಾಯಿತು. ಜೀವನ, ಕಳೆದುಕೊಳ್ಳುವಿಕೆ, ಸಂಬಂಧಗಳ ಬಗ್ಗೆ ಬಹಳಾನೇ ಕಲಿತುಕೊಂಡೆ. ನನಗೆ ಪ್ರಿಯಾ (ಚಿತ್ರದಲ್ಲಿ ರಮ್ಯಾ ಅವರ ಪಾತ್ರ) ಯಾವಾಗಲೂ ತಾಳ್ಮೆ ಮತ್ತು ಪ್ರೀತಿಯ ಅಂಶವಾಗಿ ಕಾಣುತ್ತಾಳೆ. ನಾನು ಹಾಗೆ ಪ್ರೀತಿಸಬಹುದೆಂದು ಈಗ ಬಯಸುತ್ತೇನೆ'' ಎಂದು ಬರೆದುಕೊಂಡಿದ್ದಾರೆ.