ಸ್ಯಾಂಡಲ್ವುಡ್ ನಟಿ ದಿವ್ಯಸ್ಪಂದನಾ ರಮ್ಯಾ ಪ್ರಚಲಿತ ವಿಚಾರಗಳ ಬಗ್ಗೆ ಆಗಾಗ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳುತ್ತಿರುತ್ತಾರೆ. ಈಗ ನಟಿ ಸಾಯಿ ಪಲ್ಲವಿ ನೀಡಿದ ವಿವಾದಿತ ಹೇಳಿಕೆಯೊಂದನ್ನು ಬೆಂಬಲಿಸುವ ಮೂಲಕ ರಮ್ಯಾ ಮತ್ತೆ ಸುದ್ದಿಯಲ್ಲಿದ್ದಾರೆ.
ಧರ್ಮ ಮತ್ತು ದೇವರ ಹೆಸರಿನಲ್ಲಿ ಮನುಷ್ಯರ ಮೇಲೆ ಹಲ್ಲೆ ಮಾಡುವುದು ತಪ್ಪು ಎಂದು ಹೇಳಿದ್ದ ಸಾಯಿ ಪಲ್ಲವಿ, ದಿ ಕಾಶ್ಮೀರ್ ಫೈಲ್ಸ್ ಚಿತ್ರ ಹಾಗೂ ಮುಸ್ಲಿಂ ಡ್ರೈವರ್ ಮೇಲಿನ ಹಲ್ಲೆಯನ್ನು ಹೋಲಿಕೆ ಮಾಡಿದ್ದರು.
ಸಾಯಿ ಪಲ್ಲವಿ ಸಂದರ್ಶನವೊಂದರಲ್ಲಿ ಹೇಳಿದ ಮಾತುಗಳಿಗೆ ಬೆಂಬಲ ಸೂಚಿಸಿರುವ ಸ್ಯಾಂಡಲ್ವುಡ್ ಕ್ವೀನ್, 'ತುಳಿತಕ್ಕೊಳಗಾದವರನ್ನು ರಕ್ಷಿಸಬೇಕು. ಸತ್ಯ ಹೇಳುವ ಧೈರ್ಯ ತೋರಿದ ನಿಮಗೆ ಅಭಿನಂದನೆಗಳು' ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ. ತುಳಿಕ್ಕೊಳಗಾದವರನ್ನು ರಕ್ಷಿಸಬೇಕು ಎಂದು ಸಾಯಿ ಪಲ್ಲವಿ ಸಂದರ್ಶನದಲ್ಲಿ ಹೇಳಿದ್ದರು. ಅದನ್ನೇ ಪುನಃ ಬರೆಯುವ ಮೂಲಕ ರಮ್ಯ ಸಾಯಿ ಪಲ್ಲವಿ ಮಾತುಗಳಿಗೆ ಬೆಂಬಲ ನೀಡಿದ್ದಾರೆ.
ಕಾಶ್ಮೀರದಲ್ಲಿ ಒಂದು ಕಾಲದಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ ಮಾಡಲಾಗಿತ್ತು. ಒಂದು ವೇಳೆ ನೀವು ಇದನ್ನು ಧಾರ್ಮಿಕ ಹಿನ್ನೆಲೆಯಲ್ಲಿ ನೋಡುವಿರಾದರೆ, ಇತ್ತೀಚೆಗೆ ಗೋವುಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ತಡೆಯಲಾಯಿತು ಹಾಗೂ ಆತನಿಗೆ ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯ ಮಾಡಲಾಯಿತು. ಈ ಎರಡೂ ಘಟನೆಗಳಿಗೆ ವ್ಯತ್ಯಾಸವೆಲ್ಲಿದೆ? ಒಂದು ಘಟಿಸಿಹೋಗಿದೆ. ಇನ್ನೊಂದು ವರ್ತಮಾನದಲ್ಲಿ ನಡೆದಿದೆ ಎಂದು ಸಂದರ್ಶನದಲ್ಲಿ ಸಾಯಿ ಪಲ್ಲವಿ ಹೇಳಿದ್ದು ಭಾರಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ:ಧಾರ್ಮಿಕ ಸಂಘರ್ಷ: ಕಮೆಂಟ್ ಮಾಡಿ ಟ್ರೋಲ್ ಸುಳಿಗೆ ಸಿಲುಕಿದ ನಟಿ ಸಾಯಿಪಲ್ಲವಿ