ಇದು ಸಿನಿಮಾ ಪ್ರೇಮಿಗಳಿಗೆ ಅಚ್ಚರಿ ಹಾಗೂ ಸಿಹಿ ಸುದ್ದಿ. ಸ್ಯಾಂಡಲ್‌ವುಡ್ ಕ್ವೀನ್ ಎಂದು ಹೆಸರಾಗಿರೋ ನಟಿ ರಮ್ಯ ‘ಉತ್ತರಕಾಂಡ’ ಚಿತ್ರದ ಮೂಲಕ ನಾಯಕಿಯಾಗಿ ಬೆಳ್ಳಿಪರದೆಗೆ ಹಿಂತಿರುಗುತ್ತಿದ್ದಾರೆ. ಡಾಲಿ ಧನಂಜಯ್ ಅಭಿನಯಿಸುತ್ತಿರೋ ಉತ್ತರಕಾಂಡ ಚಿತ್ರಕ್ಕೆ ಮೋಹಕ ತಾರೆ ನಾಯಕಿಯಾಗಿದ್ದಾರೆ. ಎಂಟು ವರ್ಷಗಳ ಬಳಿಕ ತಮಗೆ ಅತ್ಯಂತ ಆಪ್ತವಾದ ಕಥೆ ಹಾಗು ಪಾತ್ರ ‘ಉತ್ತರಕಾಂಡ’ ಕೊಟ್ಟಿರುವ ಕಾರಣ ಅದಕ್ಕೆ ಬೇಕಾದ ತಯಾರಿ ಮಾಡಿಕೊಂಡು ಸ್ಯಾಂಡಲ್‌ವುಡ್ ಕ್ವೀನ್ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ.
ಚಿತ್ರದ ಮುಹೂರ್ತ ನಿನ್ನೆ ಬೆಂಗಳೂರಿನ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಮುಖ್ಯ ಪಾತ್ರಧಾರಿಗಳಾದ ಧನಂಜಯ ಹಾಗು ರಮ್ಯಾ ಪೂಜೆಯಲ್ಲಿ ಭಾಗವಹಿಸಿದ್ದರು.
ಉತ್ತರಕಾಂಡದ ಬಗ್ಗೆ ರಮ್ಯಾ ಮಾತನಾಡಿ, "ರತ್ನನ್ ಪ್ರಪಂಚ ಚಿತ್ರಕ್ಕೆ ನಾಯಕಿಯ ಪಾತ್ರವನ್ನು ನನಗೆ ಕೇಳಿದಾಗ ಕಾರಣಾಂತರಗಳಿಂದ ಒಪ್ಪಿಕೊಳ್ಳಲಾಗಿರಲಿಲ್ಲ. ನನಗೆ ಅತ್ಯಂತ ಆಪ್ತವಾದ ಸಿನೆಮಾ ರತ್ನನ್ ಪ್ರಪಂಚ. ಅಂತಹ ಒಳ್ಳೆಯ ಸಿನೆಮಾ ತಂಡದ ಜೊತೆ ಕೈ ಜೋಡಿಸಿ ಬೆಳ್ಳಿಪರದೆಗೆ ಹಿಂತಿರುಗುತ್ತಿರುವುದು ಸಂತೋಷ ತಂದಿದೆ. ಇತ್ತೀಚಿನ ದಿನಗಳಲ್ಲಿ ಈ ತಂಡದ ಜೊತೆಗಿನ ಒಡನಾಟ ಮತ್ತು ತಂಡದವರೆಲ್ಲರೂ ನನ್ನ ಮೇಲೆ ತೋರುತ್ತಿರುವ ಅಭಿಮಾನ ಹಾಗು ಬಾಂಧವ್ಯ ಒಂದು ಒಳ್ಳೇ ಜಾಗದಲ್ಲಿದ್ದೀನಿ ಅನ್ನೋ ಭಾವನೆ ಕೊಟ್ಟಿದೆ. ಇಂತಹ ದೈತ್ಯ ಪ್ರತಿಭೆಗಳ ಜೊತೆ ಶೂಟಿಂಗ್ ಶುರು ಮಾಡೋದಕ್ಕೆ ಕಾಯ್ತ ಇದ್ದೀನಿ" ಎಂದರು.
ವೈವಿಧ್ಯಮಯ ಪಾತ್ರಗಳಲ್ಲಿ ನಾಯಕ ನಟನಾಗಿ ಮಿಂಚುತ್ತಿರುವ ಧನಂಜಯ ಅವರ ವೃತ್ತಿಯಲ್ಲೇ ಅತಿ ದೊಡ್ಡ ಸಿನೆಮಾ ‘ಉತ್ತರಕಾಂಡ’. ಅತ್ಯಂತ ಗಟ್ಟಿಯಾದ, ಕಷ್ಟವಾದ ಪಾತ್ರ ವಹಿಸಿಕೊಂಡಿರುವುದರ ಬಗ್ಗೆ ನಿರ್ದೇಶಕರು ಹಲವು ವಿಚಾರಗಳನ್ನು ಧನಂಜಯ್ ಹಂಚಿಕೊಂಡರು. ನಮ್ಮ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರ ಜೊತೆ ಸ್ಕ್ರೀನ್ ಹಂಚಿಕೊಳ್ಳುತ್ತಿರೋ ಈ ಸಿನಿಮಾದ ಮೂಲಕ ಕನಸು ನನಸು ಆಗುತ್ತಿದೆ. ಇದು ಮತ್ತೊಂದು ಖುಷಿಯ ವಿಚಾರ. ಪ್ರತಿ ಬಾರಿ ನನ್ನ ಪರವಾಗಿ ನಿಂತು ಯುದ್ಧ ಮಾಡುವ ಮಾಧ್ಯಮ ಮಿತ್ರರು, ನನ್ನ ಮೇಲೆ ನಂಬಿಕೆಯಿಟ್ಟು ನನ್ನ ಶಕ್ತಿಯಾಗಿ ನಿಂತಿರುವ ಕನ್ನಡ ಕುಲಕೋಟಿಗೆ ನನ್ನ ಹೃದಯಪೂರ್ವಕ ನಮನಗಳು. ಹೀಗೆ ಜೊತೆಗಿರಿ, ತಪ್ಪಾದಾಗ ತಿದ್ದಿ, ಗೆಲುವಾಗುವಂತೆ ಹರಸಿ, ಎಂದರು.
ಒಂದೇ ದಿಕ್ಕಿನಲ್ಲಿ ಆಲೋಚಿಸುವವರು ಒಟ್ಟಿಗೆ ಸೇರಿ, ನಿಸ್ವಾರ್ಥವಾಗಿ ಸಿನಿಮಾಕ್ಕಾಗಿ, ಒಬ್ಬರು ಇನ್ನೊಬ್ಬರಿಗಾಗಿ contribute ಮಾಡಿದಾಗ ಅದ್ಭುತಗಳು ಸಂಭವಿಸುತ್ತವೆ ಎಂದು ನಾನು ನಂಬಿದ್ದೇನೆ. ಅದೆ ರೀತಿ ಆಗಿದ್ದು, ಮೈಲಿಗಲ್ಲಾಗಿದ್ದು 'ರತ್ನನ್ ಪ್ರಪಂಚ'. ರೋಹಿತ್ ಪದಕಿಯಂತ ನಿರ್ದೇಶಕ ಘಟನ ಜೊತೆ ಎರಡನೇ ಪ್ರಯತ್ನ, ಕಾರ್ತಿಕ್ ಹಾಗು ಯೋಗಿಯಂತ ನಿರ್ಮಾಪಕರ ಜೊತೆ ಸತತವಾಗಿ ಮೂರನೇ ಪ್ರಯತ್ನ, ಇನ್ನೊಂದು ಮೈಲಿಗಲ್ಲಿನ ಕಡೆ ಮತ್ತೊಂದು ದಿಟ್ಟ ಹೆಜ್ಜೆ “ಉತ್ತರಕಾಂಡ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಡಾಲಿ.