ಕನ್ನಡ ಚಿತ್ರರಂಗದಲ್ಲಿ ಶಿವಾಜಿ ಸುರತ್ಕಲ್ ಭಾಗ 1 ಮತ್ತು 2 ಸಿನಿಮಾಗಳ ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಚಿತ್ರಕ್ಕೆ ನಟ ರಮೇಶ್ ಅರವಿಂದ್ ಮತ್ತು ನಿರ್ದೇಶಕ ಆಕಾಶ್ ಶ್ರೀವತ್ಸ ಕೈಜೋಡಿಸುತ್ತಿದ್ದಾರೆ. ಚಿತ್ರದ ಶೀರ್ಷಿಕೆಯನ್ನು 'ದೈಜಿ' ಎಂದು ಇಡಲಾಗಿದ್ದು, ಇದಕ್ಕೆ ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಅರ್ಥಗಳಿವೆ. ಕೊಂಕಣಿಯಲಿ ದೈಜಿ ಎಂದರೆ ರಕ್ತ ಸಂಬಂಧ, ಜಪಾನಿ ಭಾಷೆಯಲ್ಲಿ ದೈಜಿ ಎಂದರೆ ಬಹಳ ಕಾಳಜಿ ವಹಿಸಬೇಕಾದ ವಿಚಾರ ಎಂಬರ್ಥಗಳಿವೆ.
ಈ ಸಿನಿಮಾವು ಒಂದು ಸಾರ್ವತ್ರಿಕ ನೆಲೆ ಕಂಡುಕೊಳ್ಳುವ ಸಾಮರ್ಥ್ಯ ಹೊಂದಿದೆ ಎಂಬುದು ಚಿತ್ರತಂಡದ ಬಲವಾದ ನಂಬಿಕೆ. ನಿರ್ಮಾಪಕ ರವಿ ಕಶ್ಯಪ್ ವಿವರಿಸಿದ ನೈಜ ಘಟನೆಗಳನ್ನು ಆಧರಿಸಿ ಚಿತ್ರಕಥೆಯನ್ನು ಶಿವಾಜಿ ಸುರತ್ಕಲ್ ಬರೆದ ಅಭಿಜಿತ್ ವೈ ಆರ್ ಮತ್ತು ಆಕಾಶ್ ಶ್ರೀವತ್ಸ ಅವರೇ ಬರೆದಿದ್ದಾರೆ.
ಚಿತ್ರದ ನಾಯಕಿಗೆ ಈಗಾಗಲೇ ಹುಡುಕಾಟ ಪ್ರಾರಂಭವಾಗಿದೆ. ಡಿಸೆಂಬರ್ ಅಥವಾ ಜನವರಿ ತಿಂಗಳಿನಲ್ಲಿ ಶೂಟಿಂಗ್ ಪ್ರಾರಂಭವಾಗಲಿದೆ. ಸಿನಿಮಾವು ಸಂಪೂರ್ಣವಾಗಿ ಅಮೆರಿಕದಲ್ಲಿ ಚಿತ್ರೀಕರಣವಾಗಲಿದೆ. ಇತ್ತೀಚೆಗಷ್ಟೇ 25 ವರ್ಷಗಳ ಸಂಭ್ರಮ ಆಚರಿಸಿದ 'ಅಮೆರಿಕ ಅಮೆರಿಕ' ಚಿತ್ರದಂತೆಯೇ ಇದೂ ಕೂಡ ಬಹುತೇಕ ಅಮೆರಿಕದಲ್ಲಿಯೇ ನಡೆಯುವ ಕಥೆ.
ಇದನ್ನೂ ಓದಿ :50 ದಿನ ಪೂರೈಸಿದ ಶಿವಾಜಿ ಸೂರತ್ಕಲ್ 2 : ಅಭಿಮಾನಿ, ಸಿನಿಬಳಗಕ್ಕೆ ಕೃತಜ್ಞತೆ ಹೇಳಿದ ರಮೇಶ್ ಅರವಿಂದ್
ಬಹುಮುಖ ಪ್ರತಿಭೆ ಹಾಗೂ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ನಟಿಸಿ ಸೈ ಎನಿಸಿಕೊಂಡಿರುವ ರಮೇಶ್ ಅರವಿಂದ ಅವರ 106 ನೇ ಚಿತ್ರ ಇದಾಗಿದೆ. ಸಿನಿ ಜೀವನದಲ್ಲಿ ವಿಭಿನ್ನ ಪಾತ್ರಗಳಲ್ಲಿ ಮಿಂಚಿದ ರಮೇಶ್ ಅವರ ಸ್ಮರಣೀಯ ಚಿತ್ರಗಳೆಂದರೆ ಅಮೃತವರ್ಷಿಣಿ, ಅಮೆರಿಕ ಅಮೆರಿಕ, ರಾಮ ಶಾಮ ಭಾಮ, ಶಿವಾಜಿ ಸುರತ್ಕಲ್ ಮುಂತಾದವು. ತಮಿಳಿನಲ್ಲಿ ಡ್ಯೂಯೆಟ್, ಸತಿ ಲೀಲಾವತಿ, ಪಂಚತಂತಿರಂ, ಉತ್ತಮ ವಿಲ್ಲಿನ್, ತೆಲುಗು ಚಿತ್ರರಂಗದಲ್ಲಿ ಲಿಟಲ್ ಸೋಲ್ಜರ್ಸ್, ಮಲಯಾಳಂನಲ್ಲಿ ಅವನ್ ಅನಂತಪದ್ಮನಾಭನ್ ಹೀಗೆ ಬಹು ಭಾಷಾ ತಾರೆಯಾದ ರಮೇಶ್ ಅರವಿಂದ್, ದೈಜಿ ಚಿತ್ರದಲ್ಲಿ ವಿಭಿನ್ನ ಪಾತ್ರದ ಜೊತೆಗೆ ಬೇರೆಯೇ ಗೆಟಪ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ :' ಶಿವಾಜಿ ಸುರತ್ಕಲ್ 2 ' ಸಿನಿಮಾ ವೀಕ್ಷಿಸಿದ ಯದುವೀರ್ ಒಡೆಯರ್
ಈ ಚಿತ್ರವನ್ನು ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ರವಿ ಕಶ್ಯಪ್ ನಿರ್ಮಿಸುತ್ತಿದ್ದಾರೆ. ಇದಕ್ಕೂ ಮುಂಚೆ ಕಾನ್ಸ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ತೆರೆ ಕಂಡ ಕಿರು ಚಿತ್ರ ಸುಳ್ಳೇ ಸತ್ಯ, ಪವನ್ ಕುಮಾರ್ ಅವರ ಲೂಸಿಯಾ, ಡಾಲಿ ಧನಂಜಯ್ ಅವರು ನಟಿಸಿದ 'ಬದ್ಮಾಶ್' ಇದೇ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿದ್ದವು. ಸದ್ಯಕ್ಕೆ ಚಿತ್ರತಂಡವು ಚಿತ್ರೀಕರಣಕ್ಕಾಗಿ ಬಹಳ ಹುಮ್ಮಸ್ಸಿನಿಂದ ಎದುರು ನೋಡುತ್ತಿದೆ.
ಇದನ್ನೂ ಓದಿ :59ನೇ ವಯಸ್ಸಿನಲ್ಲೂ ಫಿಟ್ & ಫೈನ್, ಯುವಕರನ್ನು ನಾಚಿಸುವ ಚಾರ್ಮ್! ಬರ್ತ್‌ಡೇ ದಿನ ಹೊಸ ಸಿನಿಮಾ ಘೋಷಿಸಿದ ರಮೇಶ್ ಅರವಿಂದ್