ಆಪರೇಷನ್ ಅಲಮೇಲಮ್ಮ, ಕವಲು ದಾರಿಯಂತಹ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ ರಿಷಿ ಇದೀಗ ರಾಮನ ಅವತಾರ ತಾಳಿದ್ದಾರೆ. ಹೌದು, ರಾಮ ನವಮಿ ಪ್ರಯುಕ್ತ ಹೊಸ ಚಿತ್ರದ ಮೊದಲ ನೋಟವನ್ನು ನಟ ಹಂಚಿಕೊಂಡಿದ್ದಾರೆ. ಥೇಟ್ ರಾಮನ ವೇಷ ಧರಿಸಿರುವ ರಿಷಿ ಮತ್ತೊಂದು ಪ್ರಯೋಗಾತ್ಮಕ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಅವರ ಮುಂದಿನ ಚಿತ್ರದ ಬಗ್ಗೆ ಬರೆದುಕೊಂಡಿದ್ದಾರೆ.
ಅಲ್ಲದೇ ಸದ್ಯದಲ್ಲೇ ಕೆಣಕು ನೋಟ (ಟೀಸರ್) ಬಿಡುಗಡೆ ಮಾಡುವ ಬಗ್ಗೆಯೂ ತಿಳಿಸಿದ್ದಾರೆ. ನಟ ಟ್ವಟರ್ನಲ್ಲಿ "ಶ್ರೀರಾಮನ ಬೋಧನೆಗಳು ಮತ್ತು ಮೌಲ್ಯಗಳು ನಮ್ಮನ್ನು ತಲೆಮಾರುಗಳಿಂದ ಪ್ರಭಾವಿತಗೊಳಿಸಿವೆ ಹಾಗು ಸ್ಫೂರ್ತಿ ನೀಡಿವೆ. ಅವರ ಪರಂಪರೆಗೆ ಗೌರವ ಸಲ್ಲಿಸಲು ನಾವು ಹೆಮ್ಮೆ ಪಡುತ್ತೇವೆ. ಶೀಘ್ರದಲ್ಲೇ ಚಿತ್ರದ ಟೀಸರ್ ನಿಮ್ಮ ಮುಂದೆ ಬರಲಿದೆ. ಎಲ್ಲರಿಗೂ ಶ್ರೀ ರಾಮ ನವಮಿ ಹಬ್ಬದ ಶುಭಾಶಯಗಳು" ಎಂದು ಹಬ್ಬದ ಶುಭಾಶಯದ ಜೊತೆಗೆ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಇದನ್ನೂ ಓದಿ:IPL 2023: ನಾಳೆಯಿಂದ ಐಪಿಎಲ್ ಹಬ್ಬ; ಉದ್ಘಾಟನಾ ಸಮಾರಂಭದಲ್ಲಿ ರಶ್ಮಿಕಾ, ತಮನ್ನಾ ನೃತ್ಯ ಝಲಕ್!
ಪುರಾಣ ರಾಮನಿಗೆ ಸೀತೆ ಮಾತ್ರ ನಾಯಕಿ. ಆದರೆ, ರಿಷಿಯ ರಾಮನ ಅವತಾರಕ್ಕೆ ಇಬ್ಬರು ನಾಯಕಿಯರಿದ್ದಾರೆ. ವಜ್ರಕಾಯ ಸಿನಿಮಾ ಖ್ಯಾತಿಯ ಶುಭ್ರ ಅಯ್ಯಪ್ಪ ಹಾಗೂ ಬಟ್ಟಲು ಕಣ್ಣಿನ ಚೆಲುವೆ ಪ್ರಣಿತ ಸುಭಾಷ್. ಅರುಣ್ ಸಾಗರ್ ಸಹ ಚಿತ್ರದಲ್ಲಿ ಪ್ರಮುಖ ಪಾತ್ರವಾಗಿರಲಿದ್ದಾರೆ. ಜೂಡೊ ಸ್ಯಾಂಡಿ ಅವರ ಸಂಗೀತ ನಿರ್ದೇಶನ ಸಿನಿಮಾಕ್ಕಿದೆ. ಉಡುಪಿ, ಬೆಂಗಳೂರು ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆಸಲಾಗಿದೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಜೂನ್ ಮೊದಲ ವಾರ ಸಿನಿಮಾ ತೆರೆ ಕಾಣಲು ಚಿತ್ರತಂಡ ಯೋಜಿಸಿದೆ.