ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಆಂಧ್ರಪ್ರದೇಶದ ಗುಂಟೂರಿನ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದಲ್ಲಿ ಬಿ.ಟೆಕ್ (B Tech) ಮುಗಿಸಿದ 37 ವರ್ಷಗಳ ನಂತರ ತಮ್ಮ ಎಂಜಿನಿಯರಿಂಗ್ ಪದವಿ ಪ್ರಮಾಣ ಪತ್ರ ಪಡೆದರು. ಆರ್ಜಿವಿ ಎಂದೇ ಜನಪ್ರಿಯವಾಗಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಮ್ಮ ಪದವಿ ಪ್ರಮಾಣಪತ್ರದ ಫೋಟೋವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ತಮ್ಮ ಅಸಂಖ್ಯಾತ ಅಭಿಮಾನಿಗಳೊಂದಿಗೆ ಪದವಿ ಪಡೆದ ಹರ್ಷ ವ್ಯಕ್ತಪಡಿಸಿದರು.
37 ವರ್ಷಗಳ ನಂತರ ಬಿ.ಟೆಕ್ ಪದವಿ ಪ್ರಮಾಣಪತ್ರ ಪಡೆದಿರುವುದಕ್ಕೆ ಸಂತಸಗೊಂಡಿದ್ದೇನೆ. ವಿಶ್ವವಿದ್ಯಾನಿಲಯಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದು ವರ್ಮಾ ಟ್ವಿಟ್ ಮೂಲಕ ತಿಳಿಸಿದ್ದಾರೆ. ಟ್ವಿಟರ್ ಖಾತೆಯಲ್ಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಂದಿಗಿನ ಕೆಲವು ಚಿತ್ರಗಳನ್ನೂ ಪೋಸ್ಟ್ ಮಾಡಿದ್ದಾರೆ.
ಆರ್ಜಿವಿ ಟ್ವೀಟ್: "ನಾನು ಉತ್ತೀರ್ಣನಾದ 37 ವರ್ಷಗಳ ನಂತರ ಇಂದು ನನ್ನ ಬಿ.ಟೆಕ್ ಪದವಿ ಪ್ರಮಾಣ ಪತ್ರ ಸ್ವೀಕರಿಸುತ್ತಿರುವುದಕ್ಕೆ ತುಂಬಾ ಥ್ರಿಲ್ ಆಗಿದ್ದೇನೆ. 1985ರಲ್ಲಿ ಸಿವಿಲ್ ಇಂಜಿನಿಯರಿಂಗ್ ಅಭ್ಯಾಸ ಮಾಡಲು ಆಸಕ್ತಿ ಇಲ್ಲದ ಕಾರಣ ಬಿ.ಟೆಕ್ ಪದವಿ ಪ್ರಮಾಣಪತ್ರವನ್ನು ಎಂದಿಗೂ ತೆಗೆದುಕೊಳ್ಳಲಿಲ್ಲ" ಎಂದು ಹೇಳಿದ್ದಾರೆ. ವರ್ಮಾ 1985ರ ಜುಲೈನಲ್ಲಿ ಬಿ.ಟೆಕ್ (ಸಿವಿಲ್ ಇಂಜಿನಿಯರಿಂಗ್) ಪರೀಕ್ಷೆಯಲ್ಲಿ ಎರಡನೇ ದರ್ಜೆಯಲ್ಲಿ ಉತ್ತೀರ್ಣರಾಗಿದ್ದರು.
ನೆಟ್ಟಿಗರ ಪ್ರತಿಕ್ರಿಯೆ...:ಆರ್ಜಿವಿ ಅವರ ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಸಾಮಾಜಿಕ ಜಾಲತಾಣ ಬಳಕೆದಾರರೋರ್ವರು, "ಅದ್ಭುತ, ನಾವು ಸಿವಿಲ್ ಎಂಜಿನಿಯರ್‌ಗಳು ಪ್ರಮಾಣಪತ್ರಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನಾವು ಜಗತ್ತನ್ನು ನಿರ್ಮಿಸುತ್ತೇವೆ" ಎಂದು ಹೇಳಿದ್ದಾರೆ. ಆದರೆ ನಾನು ವಿದ್ಯಾಭ್ಯಾಸ ಪೂರ್ಣಗೊಂಡ ಕೂಡಲೇ ನನ್ನ ಸಿವಿಲ್ ಎಂಜಿನಿಯರ್ ಪ್ರಮಾಣ ಪತ್ರವನ್ನು ಸಂಗ್ರಹಿಸಿದೆ ಎಂದು ಕೂಡ ಬರೆದಿದ್ದಾರೆ.