ದಕ್ಷಿಣ ಭಾರತದ ಚಿತ್ರರಂಗದಲ್ಲಿ ಟ್ವೀಟ್, ವಿಭಿನ್ನ ಹೇಳಿಕೆ ಹಾಗೂ ಚಿತ್ರಗಳ ಮೂಲಕ ಸದಾ ಸುದ್ದಿಯಲ್ಲಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸದ್ಯ ಸಮರ ಕಲೆಯಾಧಾರಿತ Ladki: Enter The Girl Dragon ಎಂಬ ಪ್ಯಾನ್ ಇಂಡಿಯಾ ಸಿನೆಮಾ ಮಾಡಿದ್ದಾರೆ. ಈ ಚಿತ್ರವು ಜುಲೈ 15ರಂದು 'ಹುಡುಗಿ' ಎಂಬ ಶೀರ್ಷಿಕೆಯಡಿ ಕನ್ನಡದಲ್ಲೂ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಆರ್ಜಿವಿ ಹಾಗೂ ಚಿತ್ರದ ನಾಯಕಿ ಪೂಜಾ ಭಾಲೇಕರ್ ಬೆಂಗಳೂರಿನಲ್ಲಿ ಪ್ರಚಾರ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವರ್ಮಾ, ಇದು ತುಂಬಾ ವಿಶೇಷವಾದ ಸಿನೆಮಾ. ನಾನು ಚಿಕ್ಕವನಿದ್ದಾಗ 'ಎಂಟರ್ ದಿ ಡ್ರ್ಯಾಗನ್' ನೋಡಿದ್ದೆ. ಆ ಕಥೆಯ ನಾಯಕ ಬ್ರೂಸ್ಲಿಯಿಂದ ಸ್ಫೂರ್ತಿಗೊಂಡು ಈ ಸಿನೆಮಾ ಮಾಡಿದ್ದು, ಮಾರ್ಷಲ್ ಆರ್ಟ್ಸ್ಗೆ ಸಂಬಂಧಪಟ್ಟದ್ದಾಗಿದೆ. ಈ ಕಲೆ ಕರಗತ ಮಾಡಿಕೊಂಡವರ ಸಂಖ್ಯೆ ತೀರ ವಿರಳ. ಅದರಲ್ಲೂ ಹೆಣ್ಣು ಮಕ್ಕಳು ಮಾಡುವುದು ತುಂಬಾ ಕಡಿಮೆ. 12 ವರ್ಷದಿಂದ ಪೂಜಾ ಭಾಲೇಕರ್ ಸಮರಕಲೆ ಕಲಿಯುತ್ತಿದ್ದು, ಹೀಗಾಗಿ ಅವರನ್ನೇ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ಚಿತ್ರದಲ್ಲಿ ತ್ರಿಕೋನ ಲವ್ ಸ್ಟೋರಿಯೂ ಇದೆ ಎಂದರು.