ದಕ್ಷಿಣ ಭಾರತದ ಹೆಸರಾಂತ ನಟ ರಾಮ್ ಚರಣ್ 'ಪಾಪ್ ಗೋಲ್ಡನ್ ಅವಾರ್ಡ್ಸ್ 2023'ರಲ್ಲಿ ಗೋಲ್ಡನ್ ಬಾಲಿವುಡ್ ನಟ ಪ್ರಶಸ್ತಿ ಪಡೆದರು. ಇವರ ಜೊತೆಗೆ ಬಾಲಿವುಡ್ ನಟರಾದ ಶಾರುಖ್ ಖಾನ್, ದೀಪಿಕಾ ಪಡುಕೋಣೆ, ರಾಶಿ ಖನ್ನಾ, ಅದಾ ಶರ್ಮಾ ಮತ್ತು ರಿದ್ಧಿ ಡೋಗ್ರಾ ಈ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದರು. ಆದರೆ ಈ ಸೂಪರ್ ಸ್ಟಾರ್ಗಳನ್ನು ಹಿಂದಿಕ್ಕಿ ಮೆಗಾ ಪವರ್ ಸ್ಟಾರ್ ರಾಮ್ಚರಣ್ ವಿಜೇತರಾಗಿ ಹೊರಹೊಮ್ಮಿದ್ದಾರೆ.
ಪಾಪ್ ಗೋಲ್ಡನ್ ಪ್ರಶಸ್ತಿಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ನೀಡಲಾಗುತ್ತದೆ. ಪ್ರತಿ ವರ್ಷ ಈ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅಮೆರಿಕದಲ್ಲಿ ನಡೆಸಲಾಗುತ್ತದೆ. ಸಂಘಟಕರು ಈ ಪ್ರಶಸ್ತಿಗಳನ್ನು ನೀಡುವ ಮೂಲಕ ಭಾರತೀಯ ನಟರನ್ನು ಪ್ರೋತ್ಸಾಹಿಸುತ್ತಿದ್ದಾರೆ. 2023ನೇ ಸಾಲಿನ ಪ್ರಶಸ್ತಿಯನ್ನು ರಾಮ್ ಚರಣ್ ಅವರಿಗೆ ನೀಡಲಾಗಿದೆ. 'ಆರ್‌ಆರ್‌ಆರ್' ಚಿತ್ರದ ಮೂಲಕ ರಾಮ್ ಚರಣ್ ಗ್ಲೋಬಲ್ ಸ್ಟಾರ್ ಆಗಿ ಜನಮನ್ನಣೆ ಗಳಿಸಿದ್ದಾರೆ.
ನೆಟ್‌ಫ್ಲಿಕ್ಸ್ ಸಿಇಒ-ರಾಮ್ ಚರಣ್ ಭೇಟಿ:ಒಟಿಟಿ ಪ್ಲಾಟ್‌ಫಾರ್ಮ್ ಕಂಪನಿ ನೆಟ್‌ಫ್ಲಿಕ್ಸ್ ಸಿಇಒ ಟೆಡ್ ಸರಂಡೋಸ್ ಹೈದರಾಬಾದ್ಗೆ ಇತ್ತೀಚೆಗೆ ಭೇಟಿ ನೀಡಿದ್ದರು. ಗುರುವಾರ ಅವರು ರಾಮ್ ಚರಣ್ ನಿವಾಸಕ್ಕೆ ಭೇಟಿ ನೀಡಿದ್ದರು. ಟೆಡ್ ಸರಂಡೋಸ್, ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ, ಸಾಯಿಧರಮ್ ತೇಜ್, ವೈಷ್ಣವ್ ತೇಜ್ ಮತ್ತು ರಾಮಚರಣ್ ಅವರೊಂದಿಗೆ ಕೆಲಕಾಲ ಮಾತುಕತೆ ನಡೆಸಿದ್ದಾರೆ. ಈ ಭೇಟಿಗೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ರಾಮ್ ಚರಣ್, ಚಿರಂಜೀವಿ ಮಾತ್ರವಲ್ಲದೇ ಜೂನಿಯರ್ ಎನ್ಟಿಆರ್, ಮಹೇಶ್ ಬಾಬು ಸೇರಿದಂತೆ ಹಲವರನ್ನು ಅವರು ಭೇಟಿಯಾಗಿದ್ದಾರೆ. 'ಗುಂಟೂರು ಕಾರಂ'ನಲ್ಲಿ ಬ್ಯುಸಿಯಾಗಿರುವ ಮಹೇಶ್ ಬಾಬು ನೆಟ್‌ಫ್ಲಿಕ್ಸ್ ಸಿಇಒ ಜೊತೆಗಿನ ಭೇಟಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.