ಮೆಗಾಸ್ಟಾರ್ ಚಿರಂಜೀವಿ ಅವರ ಪುತ್ರ ರಾಮ್ಚರಣ್ ತೆಲುಗು ಚಿತ್ರರಂಗದ ಅತ್ಯಂತ ಜನಪ್ರಿಯ ಮತ್ತು ಯಶಸ್ವಿ ನಟರಲ್ಲಿ ಒಬ್ಬರು. ಎಸ್ಎಸ್ ರಾಜಮೌಳಿ ನಿರ್ದೇಶನದ 'ಆರ್ಆರ್ಆರ್' ಸಿನಿಮಾ ಮೂಲಕ ವಿಶ್ವದಾದ್ಯಂತ ಖ್ಯಾತಿ ಗಳಿಸಿದ್ದಾರೆ. ಇವರು ಚಿತ್ರರಂಗದಲ್ಲಿ 16 ವರ್ಷಗಳನ್ನು ಪೂರೈಸಿದ್ದಾರೆ. ಈ ಸಂತಸದ ವಿಚಾರವನ್ನು ಹಂಚಿಕೊಳ್ಳಲು ಅವರ ಪತ್ನಿ ಉಪಾಸನಾ ಕಾಮಿನೇನಿ ಸೋಷಿಯಲ್ ಮೀಡಿಯಾವನ್ನು ವೇದಿಕೆಯನ್ನಾಗಿ ಬಳಸಿಕೊಂಡರು.
ರಾಮ್ಚರಣ್ ಅವರ ಈವರೆಗಿನ ಸಿನಿಮಾಗಳ ಕೆಲವು ನೋಟಗಳನ್ನು ಕೊಲಾಜ್ ಮಾಡಿ ಹಂಚಿಕೊಂಡಿದ್ದಾರೆ. ಅದಕ್ಕೆ 'Sweet sixteen' ಎಂದು ಕ್ಯಾಪ್ಶನ್ ನೀಡಿದ್ದಾರೆ. 2007ರಲ್ಲಿ 'ಚಿರುತಾ' ಚಿತ್ರದ ಮೂಲಕ ತಮ್ಮ ಬಣ್ಣದ ಲೋಕಕ್ಕೆ ಕಾಲಿಟ್ಟ ಸ್ಟಾರ್ ನಟ ರಾಮ್ಚರಣ್ ನಂತರ ಮಗಧೀರ, ರಂಗಸ್ಥಳಂ, ಆರ್ಆರ್ಆರ್ ನಂತಹ ಹಲವಾರು ಬ್ಲಾಕ್ಬಸ್ಟರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆದ್ರೆ, ಈ ಮೂರು ಚಿತ್ರಗಳಲ್ಲಿ ಅವರು ನಟಿಸಿರುವ ಪಾತ್ರಗಳು ಮಾತ್ರ ವೃತ್ತಿಜೀವನದ ಅತ್ಯುತ್ತಮ ಆಯ್ಕೆ ಎಂದೇ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
2009 ರಲ್ಲಿ ಬಿಡುಗಡೆಯಾದ 'ಮಗಧೀರ' ರಾಮ್ಚರಣ್ ನಟನೆಯ ಅತ್ಯಂತ ಯಶಸ್ವಿ ಚಿತ್ರಗಳಲ್ಲಿ ಒಂದು. ಎಸ್ಎಸ್ ರಾಜಮೌಳಿ ನಿರ್ದೇಶನದಲ್ಲಿ ಮೂಡಿಬಂದ ಚಿತ್ರವು 17ನೇ ಶತಮಾನದ ಯೋಧನ ಕಥೆ ಒಳಗೊಂಡಿದೆ. ಅಷ್ಟೇ ಅಲ್ಲ, ರಾಮ್ಚರಣ್ ಕಾಲ ಭೈರವನ ಪಾತ್ರವನ್ನು ಸಹ ನಿರ್ವಹಿಸಿದ್ದಾರೆ. ರಾಜ್ಯಕ್ಕಾಗಿ ಹೋರಾಡುವ ತನ್ನ ಪ್ರಾಣವನ್ನೇ ತ್ಯಜಿಸುವ ವೀರ ಯೋಧನ ಕಥೆ ಇದಾಗಿದೆ.
'ರಂಗಸ್ಥಳಂ' 2018 ರಲ್ಲಿ ಬಿಡುಗಡೆಯಾದ ಸಿನಿಮಾ. ಇದು ತೆಲುಗು ಚಿತ್ರರಂಗದಲ್ಲಿ ಅಗ್ರ ನಟರ ಸ್ಥಾನದಲ್ಲಿ ರಾಮ್ಚರಣ್ ಹೆಸರನ್ನು ಮತ್ತಷ್ಟು ಭದ್ರಪಡಿಸಿತು. ತೆಲುಗಿನ ಅತ್ಯಂತ ಯಶಸ್ವಿ ಚಿತ್ರಗಳಲ್ಲಿ ಇದೂ ಒಂದು. 60 ಕೋಟಿ ರೂಪಾಯಿ ಬಜೆಟ್ನಲ್ಲಿ ತಯಾರಾದ ಚಿತ್ರ ಬಾಕ್ಸ್ ಆಫೀಸ್ನಲ್ಲಿ 216 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿತ್ತು.