ಟಾಲಿವುಡ್ ಸೂಪರ್ ಸ್ಟಾರ್ ರಾಮ್ ಚರಣ್ RRR ಚಿತ್ರದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಮನ್ನಣೆ ಗಳಿಸಿದ್ದಾರೆ. ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ಅಮೋಘವಾಗಿ ಅಭಿನಯಿಸಿ ಪ್ರಪಂಚದಾದ್ಯಂತ ಅನೇಕ ಸಿನಿ ಪ್ರೇಮಿಗಳನ್ನು ಸೆಳೆದಿದ್ದಾರೆ. ನಟನೆ ಮತ್ತು ಆಸ್ಕರ್ ಸಮಾರಂಭದ ಬಳಿಕ ಅಭಿಮಾನಿಗಳ ಸಂಖ್ಯೆ ಹೆಚ್ಚಿಸಿಕೊಂಡಿದ್ದಾರೆ. ಗೋಲ್ಡನ್ ಗ್ಲೋಬ್, ಆಸ್ಕರ್ನಂತಹ ಪ್ರತಿಷ್ಠಿತ ಪ್ರಶಸ್ತಿ ಸಮಾರಂಭಕ್ಕೆ ಹೋಗಿದ್ದ ಅವರ ಆ ಸ್ಟೈಲ್ ನೋಡಿ ಅನೇಕರು ಹಾಲಿವುಡ್ ಹೀರೋ ರೀತಿ ಕಾಣುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ರಾಮ್ ಚರಣ್ ಹಾಲಿವುಡ್ ಎಂಟ್ರಿ ಬಗ್ಗೆ ಚರ್ಚೆ ನಡೆಯುತ್ತಿದ್ದು, ಅಂತಿಮ ಅಧಿಕೃತ ಮಾಹಿತಿ ಹೊರಬರಬೇಕಷ್ಟೇ.
ಹಾಲಿವುಡ್ಗೆ ಎಂಟ್ರಿ? ಗೋಲ್ಡನ್ ಗ್ಲೋಬ್ ಮತ್ತು ಆಸ್ಕರ್ ಪ್ರಶಸ್ತಿ ಸಮಾರಂಭಗಳಲ್ಲಿ, ಸಂದರ್ಶನಗಳಲ್ಲಿ ಹಾಲಿವುಡ್ ನಿರ್ದೇಶಕರು ಮತ್ತು ನಿರ್ಮಾಪಕರೊಂದಿಗೆ ಕೆಲಸ ಮಾಡಲು ಬಯಸುತ್ತೇನೆ ಎಂದು ರಾಮ್ ಚರಣ್ ಮನದಾಸೆಯನ್ನು ಹೊರಹಾಕಿದ್ದರು. ಇದೇ ವೇಳೆ ಅವರು ಸ್ಟಾರ್ ವಾರ್ಸ್ ನಿರ್ದೇಶಕ ಜೆಜೆ ಅಬ್ರಹಾಮ್ಸ್ ಅವರನ್ನೂ ಕೂಡ ಭೇಟಿ ಆಗಿದ್ದರು. ಒಟ್ಟಿಗೆ ಸಿನಿಮಾ ಮಾಡುವ ಸಾಧ್ಯತೆ ಇದೆ ಎಂಬ ಸುದ್ದಿ ಇತ್ತು. ಆದರೆ, ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಆಸ್ಕರ್ ಸಮಾರಂಭದಲ್ಲಿ ರಾಮ್ ಚರಣ್ ಹೇಳಿದ್ದಾರೆ. ಹಾಲಿವುಡ್ ಚಿತ್ರದಲ್ಲಿನ ಪಾತ್ರದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದಾಗ್ಯೂ, ಇದು ಜೆಜೆ ಅಬ್ರಹಾಮ್ಸ್ ಅವರೊಂದಿಗೆ ಅಲ್ಲ.
'ಚರ್ಚೆ ನಡೆಯುತ್ತಿವೆ, ನಿಮ್ಮೆಲ್ಲರ ಆಶೀರ್ವಾದ':ಹಾಲಿವುಡ್ನ ಟಾಮ್ ಕ್ರೂಸ್ ಅವರ 'ಟಾಪ್ ಗನ್ 3' ಚಿತ್ರದಲ್ಲಿ ರಾಮ್ ಚರಣ್ ನಟಿಸುವ ಸಾಧ್ಯತೆಗಳಿವೆ ಎಂಬುದು ಲೇಟೆಸ್ಟ್ ಟಾಕ್. ಶುಕ್ರವಾರ ನಡೆದ ಸಂದರ್ಶನವೊಂದರಲ್ಲಿ, ರಾಮ್ ಚರಣ್ ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. 'ಹಾಲಿವುಡ್ ಸಿನಿಮಾದಲ್ಲಿ ನಟಿಸುವುದು ನಿಜವೇ? ಹಾಲಿವುಡ್ ಚಿತ್ರದ ಆಫರ್ ಬಂದಿದೆ ಎಂಬ ವರದಿಗಳನ್ನು ಓದಿದ್ದೀರಾ ಎಂದು ಕೇಳಿದಾಗ, ಚರ್ಚೆಗಳು ನಡೆಯುತ್ತಿವೆ. ನಿಮ್ಮೆಲ್ಲರ ಆಶೀರ್ವಾದ ಎಂದು ರಾಮ್ ಚರಣ್ ಉತ್ತರಿಸಿದ್ದಾರೆ. ಹಾಲಿವುಡ್ ಚಿತ್ರಕ್ಕೆ ಸಹಿ ಹಾಕಿದ್ದೀರಾ? ಅಥವಾ ಪ್ರಕ್ರಿಯೆಯಲ್ಲಿದೆಯೇ? ಎಂಬ ಪ್ರಶ್ನೆಗೆ ಎಲ್ಲವೂ ಅಂತಿಮ ನಿರ್ಧಾರಕ್ಕೆ ಬರುವ ಮುನ್ನ ಪ್ರಕ್ರಿಯೆಯಲ್ಲಿರುತ್ತದೆ, ಹಾಲಿವುಡ್ ಸಿನಿಮಾ ಮಾಡುವ ಸಾಧ್ಯತೆ ಇದೆ ಎಂದಿದ್ದಾರೆ ರಾಮ್ ಚರಣ್.