ಭಾರತದ ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾ ಕಳೆದ ಮಾರ್ಚ್ನಲ್ಲಿ ಬಿಡುಗಡೆ ಕಂಡು ವಿಶ್ವಾದ್ಯಂತ ಧೂಳೆಬ್ಬಿಸಿದೆ. ಚಿತ್ರ ಬಿಡುಗಡೆ ಆಗಿ 11 ತಿಂಗಳುಗಳಾಗಿದ್ದರೂ ಅದರ ಕ್ರೇಜ್ ಕಡಿಮೆ ಆಗಿಲ್ಲ. ಚಿತ್ರದ ನಾಟು ನಾಟು ಹಾಡು ಈಗಲೂ ಎಲ್ಲರನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತದೆ. ಇದೇ ನಾಟು ನಾಟು ಹಾಡು ಆಸ್ಕರ್ ಅಂಗಳದಲ್ಲಿದ್ದು, ಸೂಪರ್ ಸ್ಟಾರ್ ರಾಮ್ ಚರಣ್ ಅಮೆರಿಕಕ್ಕೆ ತಲುಪಿದ್ದಾರೆ. ಖ್ಯಾತ ಟಿವಿ ಕಾರ್ಯಕ್ರಮ ಆದ 'ಗುಡ್ ಮಾರ್ನಿಂಗ್ ಅಮೆರಿಕ ಶೋ'ನಲ್ಲಿ ಭಾಗವಹಿಸಿದ್ದಾರೆ. ಶೋನಲ್ಲಿ ತೆಲುಗು ನಟ ರಾಮ್ ಚರಣ್ ನಿರೂಪಕರೊಂದಿಗೆ ತಮ್ಮ ಕುಟುಂಬ ಮತ್ತು ಚಿತ್ರದ ಬಗ್ಗೆ ಮಾತನಾಡಿದ್ದಾರೆ.
ಆರ್‌ಆರ್‌ಆರ್ ಸಿನಿಮಾ ಸ್ನೇಹ ಮತ್ತು ಸಹೋದರತ್ವವನ್ನು ತೋರಿಸುತ್ತದೆ ಎಂದು ಶೋನಲ್ಲಿ ರಾಮ್ ಚರಣ್ ಹೇಳಿದರು. ಚಿತ್ರದ ನಿರ್ದೇಶಕ ರಾಜಮೌಳಿ ಅವರ ಬರವಣಿಗೆಯನ್ನು ಶ್ಲಾಘಿಸಿದರು. ಜೊತೆಗೆ ಅವರನ್ನು ಭಾರತದ ಸ್ಟೀವನ್ ಸ್ಪೀಲ್ಬರ್ಗ್ ( ವಿಶ್ವ ಖ್ಯಾತ ಹಾಲಿವುಡ್ ನಿರ್ದೇಶಕ) ಎಂದು ಕೂಡ ಕರೆದರು. ಇನ್ನೂ ರಾಮ್ ಚರಣ್ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಕಾರ್ಯಕ್ರಮದ ನಿರೂಪಕರು ಅಭಿನಂದನೆ ಸಲ್ಲಿಸಿದ್ದಾರೆ. 'ಗುಡ್ ಮಾರ್ನಿಂಗ್ ಅಮೆರಿಕ ಶೋ'ನಲ್ಲಿ ಕೆಲ ಕಾಲ ತಮಾಷೆ ಮಾಡುವ ಮೂಲಕ ರಂಜಿಸಿದ್ದಾರೆ. ಈ ದಿನಗಳಲ್ಲಿ ಪ್ಯಾಕಿಂಗ್ ಮತ್ತು ಅನ್ಪ್ಯಾಕ್ ಮಾಡುವಲ್ಲಿ ನಿರತರಾಗಿದ್ದೇನೆ ಎಂದು ರಾಮ್ ಚರಣ್ ತಿಳಿಸಿದರು.
ಈ ವರ್ಷ ಸೂಪರ್ ಸ್ಟಾರ್ ರಾಮ್ ಚರಣ್ ತಮ್ಮ ಜೀವನದ ಎರಡು ದೊಡ್ಡ ಸಂತೋಷಕರ ವಿಷಯಗಳಿಗೆ ಕಾತರದಿಂದ ಕಾಯುತ್ತಿದ್ದಾರೆ. ಮೊದಲನೆಯದು, ಅವರು ಮದುವೆಯಾಗಿ 10 ವರ್ಷಗಳ ನಂತರ ಮೊದಲ ಮಗುವಿನ ತಂದೆಯಾಗಲಿರುವ ಖುಷಿಯಲ್ಲಿದ್ದಾರೆ. ಎರಡನೆಯದು, ಅವರ 'ಆರ್‌ಆರ್‌ಆರ್' ಚಿತ್ರದ 'ನಾಟು - ನಾಟು' ಹಾಡು ಆಸ್ಕರ್‌ನಲ್ಲಿ ಅತ್ಯುತ್ತಮ ಗೀತೆ ವಿಭಾಗಕ್ಕೆ ನಾಮನಿರ್ದೇಶನ ಗೊಂಡಿದೆ. ಮಾರ್ಚ್ 12 ರಂದು ಅಕಾಡೆಮಿಯು ವಿಜೇತರ ಹೆಸರನ್ನು ಘೋಷಿಸಲಿದೆ.