'ಆರ್ಆರ್ಆರ್' ಖ್ಯಾತಿಯ ರಾಮ್ ಚರಣ್ ಅವರ ಬೆಂಬಲಿಗರು ನಟನ ಪತ್ನಿ ಉಪಾಸನಾ ಮತ್ತು ಕುಟುಂಬಸ್ಥರ ಬಗ್ಗೆ ಸುಳ್ಳು ಹೇಳಿಕೆಗಳನ್ನು ನೀಡಿದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ, ರಾಮ್ ಚರಣ್ ಬೆಂಬಲಿಗರು ವ್ಯಕ್ತಿಯೊಬ್ಬನನ್ನು ಹಿಂಸಾತ್ಮಕವಾಗಿ ಥಳಿಸಿರುವ ವಿಡಿಯೋ ಕಾಣಿಸಿಕೊಂಡಿದೆ. ವೈರಲ್ ಆಗುತ್ತಿರುವ ವಿಡಿಯೋ ತುಣುಕಿನ ಪ್ರಕಾರ, ಸಂದರ್ಶನವೊಂದರಲ್ಲಿ ರಾಮ್ ಚರಣ್ ಮತ್ತು ಅವರ ಪತ್ನಿ ಉಪಾಸನಾ ಕೊನಿಡೇಲಾ ಬಗ್ಗೆ ವ್ಯಕ್ತಿ ಅವಹೇಳನಕಾರಿ ಕಾಮೆಂಟ್ ಮಾಡಿದ ಬಗ್ಗೆ ತಿಳಿದ ನಂತರ ಈ ಘಟನೆ ನಡೆದಿದೆ.
ಗಮನ ಸೆಳೆಯುವ ಸಲುವಾಗಿ ಹಲವಾರು ಯೂಟ್ಯೂಬ್ ಚಾನೆಲ್‌ಗಳ ಸಂದರ್ಶನಗಳಲ್ಲಿ ಸೆಲೆಬ್ರಿಟಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಕುಖ್ಯಾತರಾಗಿರುವ ಸುನಿಸಿತ್ (Sunisith) ಅವರನ್ನು ರಾಮ್ ಚರಣ್ ಅವರ ಏಳು ಬೆಂಬಲಿಗರು ಗುರುತಿಸಿದ್ದಾರೆ. ಅಭಿಮಾನಿಗಳು ಸುನಿಸಿತ್ ಅವರನ್ನು ಹೊಡೆಯುವುದನ್ನು ಈ ದೃಶ್ಯದಲ್ಲಿ ಕಾಣಬಹುದು. ಉಪಾಸನಾ ಮತ್ತು ರಾಮ್ ಚರಣ್ ಅವರಲ್ಲಿ ಕ್ಷಮೆಯಾಚಿಸಲು ಸೂಚಿಸಲಾಯಿತು. ಟ್ವಿಟರ್‌ನಲ್ಲಿ ಹಲವಾರು ರಾಮ್ ಚರಣ್ ಬೆಂಬಲಿಗರು ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಈ ವಿಡಿಯೋಗೆ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸುನಿಸಿತ್ ಥಳಿತಕ್ಕೆ ಅರ್ಹರು ಎಂದು ಹಲವರು ಹೇಳಿದ್ದಾರೆ. ಅಸಂಬದ್ಧ ಹೇಳಿಕೆ ನೀಡಿದರೂ ಕೂಡ ತಪ್ಪಿಸಿಕೊಳ್ಳಬಹುದು ಎಂದು ಭಾವಿಸುವ ಜನರಿಗೆ ಈ ಪ್ರಕ್ರಿಯೆ (ಥಳಿತ) ಭಯವನ್ನು ಹುಟ್ಟುಹಾಕುತ್ತದೆ ಎಂದು ರಾಮ್ ಚರಣ್ ಬೆಂಬಲಿಗರೊಬ್ಬರು ಹೇಳಿದ್ದಾರೆ. ಆದಾಗ್ಯೂ, ಹಲವರು ಈ ಹಿಂಸಾತ್ಮಕ ಪ್ರಕ್ರಿಯೆಯನ್ನು ಒಪ್ಪಲಿಲ್ಲ. "ನಾನು ದೈಹಿಕ ಹಿಂಸೆಯನ್ನು ಬೆಂಬಲಿಸುವುದಿಲ್ಲ" ಎಂದು ಟ್ವಿಟರ್ ಬಳಕೆದಾರರೋರ್ವರು ಹೇಳಿದ್ದಾರೆ. ಆದರೆ ಈ ಮನುಷ್ಯನು ಅಸಂಬದ್ಧವಾಗಿ ಏಕೆ ಮಾತನಾಡಬೇಕು?. ಆತನ ಕುಟುಂಬವು ಅವನನ್ನು ನಿಯಂತ್ರಿಸುವುದಿಲ್ಲವೇ?. ಆತ ಪ್ರಸಿದ್ಧ ವ್ಯಕ್ತಿಗಳು ಮತ್ತು ಅವರ ಕುಟುಂಬಸ್ಥರ ಬಗ್ಗೆ ಅವಹೇಳನ ಮಾಡುವ ಮೂಲಕ ಅನಗತ್ಯವಾಗಿ ಸಮಸ್ಯೆಗಳನ್ನು ಹುಟ್ಟುಹಾಕುತ್ತಿದ್ದಾರೆ" ಎಂದು ಟ್ವಿಟರ್ ಬಳಕೆದಾರರು ಹೇಳಿದ್ದಾರೆ.