ಹೈದರಾಬಾದ್:ಮೊನ್ನೆಯಷ್ಟೆ ಲಾಸ್ ಏಂಜಲೀಸ್ನಲ್ಲಿ ನಡೆದ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ಆರ್ಆರ್ಆರ್ ಸಿನಿಮಾ ತಂಡವೇ ಯುಎಸ್ಗೆ ಹಾರಿತ್ತು. ಅದರಲ್ಲೂ ಆರ್ಆರ್ಆರ್ ಸ್ಟಾರ್ ಟಾಲಿವುಡ್ ನಟ ರಾಮ್ ಚರಣ್ ತಮ್ಮ ಪತ್ನಿ ಉಪಾಸನಾ ಕಾಮಿನೇನಿ ಸಮೇತ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಲು ತೆರಳಿದ್ದರು. ಈ ವೇಳೆಯ ಫೋಟೋವೊಂದು ನಟ ರಾಮ್ ಚರಣ್ ಅವರು ತುಂಬಾ ಧಾರ್ಮಿಕ ವ್ಯಕ್ತಿ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ.
ನಟ ರಾಮ್ ಚರಣ್ ಯಾವುದೇ ಜಾಗಕ್ಕೆ ಪ್ರಯಾಣಿಸುವುದಾದರೂ, ಯಾವಾಗಲೂ ತಮ್ಮ ನೆಚ್ಚಿನ ದೇವರುಗಳಿರುವ ಸಣ್ಣ ಪೋರ್ಟೇಬಲ್ ದೇವಾಲಯವನ್ನು ಹೊತ್ತು ಪ್ರಯಾಣಿಸುತ್ತಾರೆ. ಅದೇ ರೀತಿ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಗಮಿಸುವಾಗಲೂ ರಾಮ್ ಚತರಣ್ ತಮ್ಮ ಪೋರ್ಟೇಬಲ್ ದೇವಾಲಯದೊಂದಿಗೆ ಲಾಸ್ ಏಂಜಲೀಸ್ನಲ್ಲಿ ಲ್ಯಾಂಡ್ ಆಗಿದ್ದಾರೆ. ರಾಮ್ ಚರಣ್ ಪತ್ನಿ ಉಪಾಸನಾ ಕಾಮಿನೇನಿ ತಮ್ಮ ಇನ್ಸ್ಟಾಗ್ರಾಂ ಸ್ಟೋರೀಸ್ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ವಿಡಿಯೋದಲ್ಲಿ ದಂಪತಿ ಜೊತೆಯಾಗಿ ನಿಂತು ಪುಟ್ಟ ದೇವಾಲಯದಲ್ಲಿರುವ ರಾಮ, ಲಕ್ಷ್ಮಣ, ಸೀತಾ ಹಾಗೂ ಹನುಮಂತನ ಸಣ್ಣ ಮೂರ್ತಿಗಳ ಮುಂದೆ ಪ್ರಾರ್ಥಿಸುತ್ತಿರುವುದನ್ನು ಕಾಣಬಹುದು.
'ನಾವು ಎಲ್ಲಿಗೆ ಹೋದರೂ ನಾನು ಮತ್ತು ನನ್ನ ಪತ್ನಿ ಮಿನಿ ದೇವಸ್ಥಾನವನ್ನು ನಮ್ಮ ಜೊತೆಗೆ ತೆಗೆದುಕೊಂಡು ಹೋಗುತ್ತೇವೆ. ಈ ರೀತಿ ಮಾಡುವುದರಿಂದ ನಾವು ಎಲ್ಲೇ ಇದ್ದರೂ ಇದು ನಮ್ಮನ್ನು ನಮ್ಮ ಶಕ್ತಿಗಳಿಗೆ ಹಾಗೂ ನಮ್ಮ ದೇಶ ಭಾರತಕ್ಕೆ ನಮ್ಮನ್ನು ಸದಾ ಸಂಪರ್ಕದಲ್ಲಿರುವಂತೆ ಮಾಡುತ್ತದೆ' ಎಂದು ಅದೇ ವಿಡಿಯೋದಲ್ಲಿ ರಾಮ್ ಚರಣ್ ಹೇಳಿದ್ದಾರೆ. ಸದ್ಯ ರಾಮ್ ಚರಣ್ ಹಾಗೂ ಉಪಾಸನಾ ಕಾಮಿನೇನಿ ಅಮೆರಿಕದಲ್ಲಿದ್ದಾರೆ.
ಮೊನ್ನೆ ನಡೆದ 95ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ರಾಜಮೌಳಿ ನಿರ್ದೇಶನ ಆರ್ಆರ್ಆರ್ ಸಿನಿಮಾದ ನಾಟು ನಾಟು ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದಿದೆ. ಪ್ರಶಸ್ತಿ ಗೆದ್ದ ಖುಷಿಯನ್ನು ಚಿತ್ರತಂಡ ಲಾಸ್ ಏಂಜಲೀಸ್ನಲ್ಲಿ ಸಂಭ್ರಮಿಸುತ್ತಿದೆ. ಕಳೆದ ಕೆಲವು ವರ್ಷಗಳಿಂದ ಆಸ್ಕರ್ನಲ್ಲಿ ಸೋಲುತ್ತಿದ್ದ ಕಾಗುಣಿತವನ್ನು ಮುರಿಯುವ ಮೂಲಕ ಆರ್ಆರ್ಆರ್ ಹಾಡು ಆಸ್ಕರ್ ಗೆದ್ದು ಪ್ರಪಂಚವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದೆ.
ಅಕಾಡೆಮಿ ಪ್ರಶಸ್ತಿ ವೇದಿಕೆಯಲ್ಲಿ ಆರ್ಆರ್ಆರ್ ಚಿತ್ರ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ಇಡೀ ತಂಡವೇ ಖುಷಿಯಿಂದ ಹರ್ಷೋದ್ಗಾರ ಮಾಡಿದೆ. ಆ ಕ್ಷಣವನ್ನು ಸಿನಿಮಾ ತಂಡದ ನಿರ್ದೇಶಕ ಎಸಸ್ ಎಸ್ ರಾಜಮೌಳಿ, ಹಾಡಿಗೆ ಸಾಹಿತ್ಯ ಬರೆದಿದ್ದ ಚಂದ್ರಬೋಸ್, ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ, ನಟರಾದ ಜೂನಿಯ್ ಎನ್‌ಟಿಆರ್ ಹಾಗೂ ರಾಮ್ ಚರಣ್ ಉನ್ನತ ಮಟ್ಟದಲ್ಲಿ ಸಂಭ್ರಮಿಸಿದ್ದಾರೆ. ಆರ್ಆರ್ಆರ್ ತಂಡದ ಗೆಲುವಿನ ಕ್ಷಣಗಳನ್ನು ಸೆರೆಹಿಡಿದಿರುವ ಅದೆಷ್ಟೋ ಫೋಟೋಗಳು, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಸಿನಿಮಾ ತಂಡದೊಂದಿಗೆ ಬಳಕೆದಾರರು ಕೂಡ ಆಸ್ಕರ್ ಭಾರತಕ್ಕೆ ದೊರೆತ ಪ್ರಶಸ್ತಿ ಎಂಬಂತೆ ಖುಷಿ ಪಟ್ಟಿದ್ದಾರೆ.
ಪ್ರಶಸ್ತಿ ಘೋಷಣೆಯಾದ ಬೆನ್ನಲ್ಲೆ ಸ್ಟಾರ್ಗಳಾದ ರಾಮ್ ಚರಣ್ ಹಾಗೂ ಜೂನಿಯರ್ ಎನ್‌ಟಿಆರ್ ಇಬ್ಬರೂ ಪರಸ್ಪರ ತಬ್ಬಿಕೊಂಡು ಸಂತೋಷ ಹಂಚಿಕೊಂಡರು. ಉಪಾಸನಾ ಕಾಮಿನೇನಿ ಅವರು ನಟರಿಬ್ಬರ ಸಂತೋಷದ ಕ್ಷಣಗಳನ್ನು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೂಡ ಆಸ್ಕರ್ನಲ್ಲಿ ನಿರೂಪಕರಲ್ಲಿ ಒಬ್ಬರಾಗಿ ಭಾಗವಹಿಸಿದ್ದು, ಭಾರತದ ಆರ್ಆರ್ಆರ್ ಸಿನಿಮಾದ ಹಾಡಿಗೆ ಪ್ರಶಸ್ತಿ ಘೋಷಣೆಯಾದಾಗ ಸಂಭ್ರಮಿಸಿದ್ದು, ಅವರ ಸಂತೋಷವನ್ನು ಹಾಗೂ ನಿರ್ದೇಶಕ ರಾಜಮೌಳಿ ಅವರ ಸಂತೋಷದ ಕ್ಷಣವನ್ನೂ ಕ್ಯಾಮರಾಗಳು ಸೆರೆಹಿಡಿದಿದ್ದವು.
ಇದನ್ನೂ ಓದಿ:ಆಸ್ಕರ್ ಗೆದ್ದ ಆರ್ಆರ್ಆರ್: ಜೂ.ಎನ್‌ಟಿಆರ್, ರಾಮ್ಚರಣ್ ಹರ್ಷೋದ್ಗಾರ ಹೀಗಿತ್ತು..