ಹೈದರಬಾದ್:ಗ್ಲೋಬಲ್ ಸ್ಟಾರ್ ಖ್ಯಾತಿಯ ರಾಮ್ ಚರಣ್ ಇತ್ತೀಚೆಗಷ್ಟೇ ನಿರ್ಮಾಣ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ನಿರ್ಮಾಪಕ ವಿಕ್ರಂ ರೆಡ್ಡಿ ಅವರೊಂದಿಗೆ ಸೇರಿ 'ವಿ ಮೆಗಾ ಪಿಚರ್ಸ್' ಬ್ಯಾನರ್ ಪ್ರಾರಂಭಿಸಿದ್ದರು. ಈ ಮೂಲಕ ತಮ್ಮ ಪ್ರೊಡಕ್ಷನ್ ಹೌಸ್ನಿಂದ ನಿರ್ಮಾಣವಾಗುತ್ತಿರುವ ಮೊದಲ ಚಿತ್ರದ ಬಗ್ಗೆ ಇಂದು ಮಾಹಿತಿ ಹಂಚಿಕೊಂಡಿದ್ದಾರೆ.
ತಾವು ನಿರ್ಮಿಸುತ್ತಿರುವ ಮೊದಲ ಚಿತ್ರದಲ್ಲಿ ನಿಖಿಲ್ ಸಿದ್ಧಾರ್ಥ್ ನಾಯಕನಾಗಿ ನಟಿಸುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಅವರ 140ನೇ ಜನ್ಮದಿನದ ಸಂದರ್ಭದಲ್ಲಿ 'ದಿ ಇಂಡಿಯಾ ಹೌಸ್' ಸಿನಿಮಾ ಘೋಷಿಸಲು ತುಂಬಾ ಸಂತೋಷವಾಗುತ್ತಿದೆ ಎಂದು ತಿಳಿಸಿದ್ದಾರೆ. ಜೊತೆಗೆ, ಸಿನಿಮಾದ ಪೋಸ್ಟರ್ ಹಂಚಿಕೊಂಡಿದ್ದಾರೆ.
ಲಂಡನ್ನ ಹಿನ್ನೆಲೆ ಹೊಂದಿರುವ 'ದಿ ಇಂಡಿಯಾ ಹೌಸ್' ಭಾರತದ ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಘಟನೆಗಳನ್ನು ಆಧರಿಸಿದೆ. ಸಿನಿಮಾದಲ್ಲಿ ನಾಯಕ ನಿಖಿಲ್ ಶಿವನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಮ್ ವಂಶಿ ಕೃಷ್ಣ ನಿರ್ದೇಶನದ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ಅನುಪಮ್ ಖೇರ್ ನಟಿಸುತ್ತಿದ್ದಾರೆ. ಅನುಪಮ್ ಅವರು ಶ್ಯಾಮ್‌ಜಿ ಕೃಷ್ಣ ವರ್ಮಾ ಅವರ ಪಾತ್ರ ನಿರ್ವಹಿಸಲಿದ್ದಾರೆ. ರಾಮ್ ಚರಣ್ ಜೊತೆಗೆ ತೇಜ್ ನಾರಾಯಣ ಅಗರ್ವಾಲ್ ಮತ್ತು ಅಭಿಷೇಕ್ ಅಗರ್ವಾಲ್ ಕೂಡ ಈ ಸಿನಿಮಾವನ್ನು ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.
ಇಂಡಿಯಾ ಹೌಸ್ ಸಿನಿಮಾ ಲಂಡನ್‌ನಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಘಟನೆ ಕುರಿತ ಕಥಾ ಹಂದರ ಹೊಂದಿದೆ. ಇಂಡಿಯಾ ಹೌಸ್ ಸುತ್ತ ನಡೆದ ರಾಜಕೀಯ ಪ್ರಕ್ಷುಬ್ಧತೆಯ ಸಮಯದಲ್ಲಿ ಪ್ರೇಮಕಥೆಯೊಂದನ್ನು ಬಿಚ್ಚಿಡುವ ಬಗ್ಗೆ ಸಿನಿಮಾದ ಟೀಸರ್ ಸುಳಿವು ನೀಡಿದೆ. ಇಂಡಿಯಾ ಹೌಸ್ ರಾಷ್ಟ್ರೀಯವಾದಿ ವಕೀಲ ಮತ್ತು ಭಾರತೀಯ ಸಮಾಜಶಾಸ್ತ್ರಜ್ಞ ಶ್ಯಾಮ್‌ಜಿ ಕೃಷ್ಣ ವರ್ಮಾ ಅವರು ನಡೆಸುತ್ತಿದ್ದ ಭಾರತೀಯ ವಿದ್ಯಾರ್ಥಿಗಳ ನಿವಾಸವಾಗಿತ್ತು. ಶ್ಯಾಮ್‌ಜಿ ಕೃಷ್ಣ ವರ್ಮಾ ಅವರೊಂದಿಗೆ ಮಹಾತ್ಮ ಗಾಂಧಿ ಕ್ರಾಂತಿ ಮತ್ತು ಅಹಿಂಸೆಯ ವಿಷಯಗಳ ಬಗ್ಗೆ ಆಳವಾದ ಚರ್ಚೆಗಳನ್ನು ನಡೆಸುತ್ತಿದ್ದರು. ಇದು ಗಾಂಧೀದಿಗೆ 1909 ರ ಪ್ರಣಾಳಿಕೆ ಹಿಂದ್ ಸ್ವರಾಜ್ ಬರೆಯಲು ಪ್ರೇರೇಪಿಸಿತ್ತು.
ಈ ಸಿನಿಮಾ ಉದಯೋನ್ಮುಖ ಪ್ರತಿಭೆಗಳಿಗೆ ಮಿಂಚಲು ವೇದಿಕೆ ನೀಡುವುದರೊಂದಿಗೆ ಪ್ಯಾನ್ ಇಂಡಿಯನ್ ಪ್ರೇಕ್ಷಕರನ್ನು ತಮ್ಮತ್ತ ಸೆಳೆಯುವ ಗುರಿ ಹೊಂದಿದೆ. ರಾಮ್ ಚರಣ್, ಶಂಕರ್ ನಿರ್ದೇಶನದ ಗೇಮ್ ಚೇಂಜರ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾವಾಗಿದ್ದು, ಕಿಯಾರಾ ಅಡ್ವಾಣಿ ನಾಯಕಿಯಾಗಿದ್ದಾರೆ.
ನಿಖಿಲ್ ಸದ್ಯ ಕಾರ್ತಿಕೇಯ 2 ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. '18 ಪುಟಗಳು' ಎಂಬ ಸಿನಿಮಾದಲ್ಲಿನ ತಮ್ಮ ಅದ್ಬುತ ನಟನೆಯೊಂದಿಗೆ ಮೆಚ್ಚುಗೆ ಪಡೆದಿದ್ದರು. ಸದ್ಯದಲ್ಲೇ ‘ಸ್ಪೈ’ ಎಂಬ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈ ಸಿನಿಮಾದ ಮೇಲೆ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕಾರ್ತಿಕೇಯ 2 ನಂತರ ನಿಖಿಲ್, ಅನುಪಮ್ ಖೇರ್, ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಜೊತೆ ದಿ ಇಂಡಿಯಾ ಹೌಸ್ ಸಿನಿಮಾಗಾಗಿ ಮತ್ತೊಮ್ಮೆ ಒಂದಾಗಿದ್ದಾರೆ.
ಇದನ್ನೂ ಓದಿ:ಸೂಪರ್ ಸ್ಟಾರ್ ಮಗಳು ಎಂಬ ಅಹಂ ಇಲ್ಲ ನಟಿ ಸುಹಾನಾಗೆ: ಶಾರುಖ್ ಮಗಳನ್ನು ಹೊಗಳಿದ ನೃತ್ಯ ಸಂಯೋಜಕ