ಕಳೆದ ವರ್ಷ ತಮ್ಮ ವಿನೂತನ ಪ್ರಯತ್ನದಿಂದ ಕನ್ನಡ ಚಿತ್ರರಂಗಕ್ಕೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ತಂದುಕೊಟ್ಟ ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಅವರೀಗ 'ಐಕಾನಿಕ್ ಡೈರೆಕ್ಟರ್' ಆಗಿ ಹೊರಹೊಮ್ಮಿದ್ದಾರೆ. ಜೊತೆಗೆ, '777 ಚಾರ್ಲಿ' ಚಿತ್ರದಲ್ಲಿ ತಮ್ಮ ಅದ್ಭುತ ಅಭಿನಯದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾದ ರಕ್ಷಿತ್ ಶೆಟ್ಟಿ 'ಟ್ರೆಂಡಿಂಗ್ ಆ್ಯಕ್ಟರ್' ಆಗಿದ್ದಾರೆ. ಸ್ಯಾಂಡಲ್ವುಡ್ನ ಇಬ್ಬರು ಸೂಪರ್ಸ್ಟಾರ್ಸ್ ಇಂಥದ್ದೊಂದು ಪ್ರಶಸ್ತಿಗೆ ಭಾಜನರಾಗಿದ್ದು ಇನ್ನೋವೇಟೀವ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ.
6ನೇ ಇನ್ನೋವೇಟೀವ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ:ಇನ್ನೋವೇಟೀವ್ ಫಿಲಂ ಅಕಾಡೆಮಿ, ಇನ್ನೋವೇಟೀವ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂಸ್ಥಾಪಕ ಶರವಣ ಪ್ರಸಾದ್, ಮಾರತ್‍ಹಳ್ಳಿಯ ಇನ್ನೋವೇಟೀವ್ ಮಲ್ಟಿಪ್ಲೆಕ್ಸ್ನಲ್ಲಿ ಆಯೋಜಿಸಿರುವ ನಾಲ್ಕು ದಿನಗಳ 6ನೇ ಇನ್ನೋವೇಟೀವ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭ ಅದ್ಧೂರಿಯಾಗಿ ನಡೆಯಿತು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಐ.ಎ.ಎಸ್ ಅಧಿಕಾರಿ ಅಪೂರ್ವ ಚಂದ್ರ ಭಾಗವಹಿಸಿ, ಚಿತ್ರೋತ್ಸವ ಉದ್ಘಾಟಿಸಿದರು. ಚಿತ್ರೋತ್ಸವದ ಅಧ್ಯಕ್ಷ ರಾಕ್‍ಲೈನ್ ವೆಂಕಟೇಶ್, ಫಿಲಂ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ರವಿ ಕೊಟ್ಟಾರ್ಕರ ಮತ್ತು ಹಲವು ಅಂತಾರಾಷ್ಟ್ರೀಯ ಖ್ಯಾತಿಯ ನಿರ್ದೇಶಕರು ಅತಿಥಿಗಳಾಗಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಅವರಿಗೆ ಈ ವಿಶೇಷ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
'ಎಲ್ಲವೂ ಸಲ್ಲಬೇಕಾಗಿರುವುದು ಕನ್ನಡಿಗರಿಗೆ....'ಈ ಸಂದರ್ಭದಲ್ಲಿ ಮಾತನಾಡಿದ ನಟ ರಿಷಬ್ ಶೆಟ್ಟಿ, ಕಾಂತಾರ ಚಿತ್ರಕ್ಕೆ ಸಿಕ್ಕ ಪ್ರಶಸ್ತಿಗಳು ಮತ್ತು ಜನಪ್ರಿಯತೆ ಎಲ್ಲವೂ ಸಲ್ಲಬೇಕಾಗಿರುವುದು ಕನ್ನಡಿಗರಿಗೆ. ಅವರು ಈ ಚಿತ್ರಕ್ಕೆ ಅದ್ಭುತ ಯಶಸ್ಸು ಕೊಟ್ಟರು, ಬಳಿಕ ಅದು ಬೇರೆ-ಬೇರೆ ಭಾಷೆಗಳಿಗೆ ತಲುಪಿತು. ಹಾಗಾಗಿ, ಕನ್ನಡಿಗರಿಗೆ ನಾನು ಚಿರಋಣಿ. ಕನ್ನಡ ಚಿತ್ರಗಳು ರಾಷ್ಟ್ರ ಮಟ್ಟದಲ್ಲಿ ಜನಪ್ರಿಯತೆ ಪಡೆಯುತ್ತಿವೆ. ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿವೆ. ಆದರೆ, ಆ ಚಿತ್ರಗಳಿಗೆ ಇಲ್ಲಿ ಚಿತ್ರಮಂದಿರಗಳು ಸಿಗುವುದಿಲ್ಲ. ಹಾಗೆಯೇ, ಓಟಿಟಿಗಳಲ್ಲೂ ಪ್ರಾಧಾನ್ಯತೆ ಸಿಗುವುದಿಲ್ಲ. ಎನ್.ಎಫ್.ಡಿ.ಸಿ ಮತ್ತು ಫಿಲಂ ಬಜಾರ್ಗಳಿಗೆ ಆಯ್ಕೆಯಾಗುವ ಚಿತ್ರಗಳಿಗೆ ಪ್ರದರ್ಶನವಾಗುವಂತೆ ಒಂದು ವೇದಿಕೆ ಕಲ್ಪಿಸಬೇಕು ಎಂದು ಐ.ಎ.ಎಸ್ ಅಧಿಕಾರಿ ಅಪೂರ್ವ ಚಂದ್ರ ಅವರಿಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ:''ವಿಕಲತೆ ಮೆಟ್ಟಿ ನಿಂತು ಅದ್ಭುತ ಸಾಧನೆ ಮಾಡಿರುವ ನಿಮಗೆ ನಾವು ಚಿರಋಣಿ'': ಅಶ್ವಿನಿ ಪುನೀತ್ ರಾಜಕುಮಾರ್