ರಕ್ಷಾ ಬಂಧನ 2023:ರಕ್ಷಾ ಬಂಧನ ಒಡಹುಟ್ಟಿದವರ ನಡುವಿನ ವಿಶೇಷ ಬಂಧವನ್ನು ಸೂಚಿಸುತ್ತದೆ. ಮಂಗಳಕರವಾದ ಈ ಹಬ್ಬವನ್ನು ಇಂದು ಭಾರತದಾದ್ಯಂತ ಬಹಳ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ನಮ್ಮ ನೆಚ್ಚಿನ ಬಾಲಿವುಡ್ ಸೆಲೆಬ್ರಿಟಿಗಳು ಇದಕ್ಕೆ ಹೊರತಾಗಿಲ್ಲ. ಪ್ರತಿ ವರ್ಷ, ಬಿ - ಟೌನ್ ನಟರು ತಮ್ಮ ತಮ್ಮ ಒಡಹುಟ್ಟಿದವರ ಜತೆ ಸಮಯ ಕಳೆಯುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಆಚರಣೆಗಳ ಕೆಲ ತುಣುಕುಗಳನ್ನು ಹಂಚಿಕೊಳ್ಳುತ್ತಾರೆ. ತಮ್ಮ ವೃತ್ತಿಪರ ಉದ್ಯಮಗಳಲ್ಲಿ ಮಿಂಚಿರುವ ಕೆಲವು ಪ್ರಸಿದ್ಧ ಬಾಲಿವುಡ್ ಒಡಹುಟ್ಟಿದವರ ಪಟ್ಟಿ ಇಲ್ಲಿದೆ.
ಅರ್ಜುನ್ ಕಪೂರ್ ಮತ್ತು ಜಾನ್ವಿ ಕಪೂರ್:ದಿವಂಗತ ನಟಿ ಶ್ರೀದೇವಿ ಮತ್ತು ಬೋನಿ ಕಪೂರ್ ಅವರ ಪುತ್ರಿ ಜಾನ್ವಿ ಕಪೂರ್ ಮತ್ತು ನಟ ಅರ್ಜುನ್ ಕಪೂರ್ ತುಂಬಾ ಆತ್ಮೀಯ ಬಾಂಧವ್ಯ ಹೊಂದಿದ್ದಾರೆ. ಶ್ರೀದೇವಿ ನಿಧನದ ನಂತರ ಇವರಿಬ್ಬರು ಆತ್ಮೀಯರಾದರು. ಜಾನ್ವಿ ಮಾತ್ರವಲ್ಲದೇ ಅವರ ತಂಗಿ ಖುಷಿ ಕಪೂರ್ ಕೂಡ ಅರ್ಜುನ್ ಜೊತೆ ಆಗಾಗ ಸುತ್ತಾಡುತ್ತಾರೆ. ಜಾನ್ವಿ ಮತ್ತು ಖುಷಿ ಜತೆಗೆ, ಅರ್ಜುನ್‌ಗೆ ಅನ್ಶುಲಾ ಕಪೂರ್ ಎಂಬ ಸಹೋದರಿ ಕೂಡ ಇದ್ದಾರೆ.
ನವ್ಯಾ ನಂದ ಮತ್ತು ಅಗಸ್ತ್ಯ ನಂದ: ನಟ ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ ಅವರ ಮೊಮ್ಮಕ್ಕಳು ಪ್ಯಾಪ್ ಫೇವರಿಟ್ ಆಗಿದ್ದಾರೆ. ಆಗಾಗ ಒಟ್ಟಿಗೆ ನಗರದಲ್ಲಿ ಸುತ್ತಾಡುತ್ತಿರುತ್ತಾರೆ. ಅಗಸ್ತ್ಯ ನಂದಾ ಶೀಘ್ರದಲ್ಲೇ ಜೋಯಾ ಅಖ್ತರ್ ಅವರ 'ದಿ ಆರ್ಚೀಸ್' ಚಿತ್ರದ ಮೂಲಕ ನಟನೆಗೆ ಪದಾರ್ಪಣೆ ಮಾಡಲಿದ್ದಾರೆ. ಆದರೆ ನವ್ಯಾ ಅವರು ಚಿತ್ರರಂಗಕ್ಕೆ ಸೇರುವ ಇಂಗಿತ ವ್ಯಕ್ತಪಡಿಸಿಲ್ಲ.
ಸಲ್ಮಾನ್ ಖಾನ್ ಮತ್ತು ಅರ್ಪಿತಾ ಖಾನ್:ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ತನ್ನ ಸಹೋದರಿಯರಾದ ಅರ್ಪಿತಾ ಮತ್ತು ಅಲ್ವಿರಾ ಇಬ್ಬರೊಂದಿಗೆ ತುಂಬಾ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇಡೀ ಖಾನ್ ಕುಟುಂಬಸ್ಥರು ಆಗಾಗ ಹಬ್ಬಗಳು ಮತ್ತು ವಿಶೇಷ ಸಂದರ್ಭಗಳಲ್ಲಿ ಒಟ್ಟಿಗೆ ಸೇರುತ್ತಾರೆ. ಅರ್ಪಿತಾ ನಟ ಆಯುಷ್ ಶರ್ಮಾ ಅವರನ್ನು ಮದುವೆಯಾಗಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.