ಎಂಡೊಮೆಟ್ರಿಯಲ್ ಕ್ಯಾನ್ಸರ್ ಹಿನ್ನೆಲೆ ಶನಿವಾರ ರಾತ್ರಿ ಕೊನೆಯುಸಿರೆಳೆದ ನಟಿ ರಾಖಿ ಸಾವಂತ್ ಅವರ ತಾಯಿ ಜಯಾ ಭೇದಾ (73) ಅವರ ಅಂತ್ಯಕ್ರಿಯೆಯನ್ನು ಇಂದು ಅಂಧೇರಿಯ ಓಶಿವಾರದಲ್ಲಿ ನೆರವೇರಿಸಲಾಯಿತು. ತನ್ನ ತಾಯಿಯ ಅಂತಿಮ ವಿಧಿವಿಧಾನಗಳನ್ನು ನಟಿ ರಾಖಿ ಸಾವಂತ್ ನೆರವೇರಿಸಿದ್ದಾರೆ. ತಮ್ಮ ದುಃಖವನ್ನು ನಿಯಂತ್ರಿಸಲಾಗದೇ ಕೊನೆ ಕ್ಷಣದಲ್ಲಿ ಅಸಹನೀಯವಾಗಿ ನಟಿ ಕಣ್ಣೀರು ಸುರಿಸಿದ್ದಾರೆ.
ಚಿತ್ರರಂಗದವರಿಂದ ಸಂತಾಪ:ಫರಾ ಖಾನ್, ರಶ್ಮಿ ದೇಸಾಯಿ, ಸಂಗೀತಾ ಕಪೂರೆ ಮತ್ತು ಎಹ್ಸಾನ್ ಖುರೇಷಿ, ರಾಜೀವ್ ಭಾಟಿಯಾ, ನಟ-ಫ್ಯಾಶನ್ ಡಿಸೈನರ್ ರೋಹಿತ್ ಕೆ ವರ್ಮಾ ಸೇರಿದಂತೆ ರಾಖಿ ಸಾವಂತ್ ಅವರ ಸ್ನೇಹಿತರು ಜಯಾ ಭೇದಾ ಅವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದರು. ಚಿತ್ರ ನಿರ್ಮಾಪಕಿ ಫರಾ ಖಾನ್ ರಾಖಿ ಅವರನ್ನು ತಬ್ಬಿಕೊಂಡು ಅವರನ್ನು ಸಾಂತ್ವನಪಡಿಸಲು ಪ್ರಯತ್ನಿಸಿದರು.
ಜಯಾ ಭೇದಾ ಅಂತ್ಯಸಂಸ್ಕಾರ:ಜಯ ಭೇದಾ ಅವರ ಪಾರ್ಥಿವ ಶರೀರಕ್ಕೆ ರಾಖಿ ಸಾವಂತ್, ಪತಿ ಆದಿಲ್ ಖಾನ್ ಮತ್ತು ರಾಖಿ ಅವರ ಸಹೋದರ ಪುಷ್ಪನಮನ ಸಲ್ಲಿಸಿ ವಿಧಿವಿಧಾನಗಳನ್ನು ನೆರವೇರಿಸಿಕೊಟ್ಟರು. ಅಂಧೇರಿಯ ಓಶಿವಾರದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.
ಇನ್‌ಸ್ಟಾಗ್ರಾಮ್‌ನಲ್ಲಿ ದುರದೃಷ್ಟಕರ ಸುದ್ದಿಯನ್ನು ಹಂಚಿಕೊಂಡ ನಟಿ ರಾಖಿ ಸಾವಂತ್, ''ಇಂದು ನನ್ನ ತಾಯಿಯ ಕೈ ನನ್ನ ತಲೆಯಿಂದ ಜಾರಿ ಹೋಯಿತು. ನನಗೆ ಕಳೆದುಕೊಳ್ಳಲು ಏನೂ ಉಳಿದಿಲ್ಲ. ಅಮ್ಮಾ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಇನ್ನು ನನ್ನ ಮಾತನ್ನು ಯಾರು ಕೇಳುತ್ತಾರೆ ಎಂದು ಬರೆದುಕೊಂಡಿದ್ದಾರೆ.
ಸಂತಾಪ: ಜಯಾ ಭೇದಾ ಅವರಿಗೆ ನಾಲ್ಕನೇ ಹಂತದ ಎಂಡೊಮೆಟ್ರಿಯಲ್ ಕ್ಯಾನ್ಸರ್ ಇದ್ದು, ಅದು ಮೆದುಳು, ಶ್ವಾಸಕೋಶ ಮತ್ತು ಯಕೃತ್ತಿಗೆ ಹರಡಿತ್ತು. ಹಾಗಾಗಿ ಕಳೆದ ಹದಿನೈದು ದಿನಗಳ ಹಿಂದೆ ಮುಂಬೈನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಶನಿವಾರ ರಾತ್ರಿ 9 ಗಂಟೆಗೆ ಇಹಲೋಕ ತ್ಯಜಿಸಿದ್ದಾರೆ. ವಿಷಯ ಹೊರ ಬರುತ್ತಿದ್ದಂತೆ ಚಿತ್ರ ರಂಗದವರು, ಗಣ್ಯರು ಸೇರಿದಂತೆ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ:ರಾಖಿ ಸಾವಂತ್ಗೆ ಮಾತೃವಿಯೋಗ; ಅತ್ತು ಗೋಗರೆದ ನಟಿ
ಹಿರಿಯ ನಟ ಜಾಕಿ ಶ್ರಾಫ್ ಜಯಾ ಭೇದಾ ನಿಧನಕ್ಕೆ ಸಂತಾಪ ಸೂಚಿಸಿದ್ದು, "ನನ್ನ ತಾಯಿ, ತಂದೆ, ಸಹೋದರರನ್ನು ಕಳೆದುಕೊಂಡು ನೀವು ಅನುಭವಿಸುತ್ತಿರುವ ನೋವನ್ನು ನಾನು ಅನುಭವಿಸಿದ್ದೇನೆ, ಅವರ ಆತ್ಮ ಯಾವಾಗಲೂ ನಮ್ಮೊಂದಿಗೆ ಇರುತ್ತದೆ" ಎಂದು ಹೇಳಿದ್ದಾರೆ. ನಟಿ ರಿಧಿಮಾ ಪಂಡಿತ್ ಸಂಪಾಪ ಸೂಚಿಸಿದ್ದು, ರಾಖಿ ಗಟ್ಟಿಯಾಗಿರಿ ಎಂದು ಆತ್ಮಸ್ಥೈರ್ಯ ತುಂಬಿದ್ದಾರೆ. ಜೊತೆಗೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದ್ದಾರೆ. ಗಾಯಕ ಅಂಕಿತ್ ತಿವಾರಿ ಪ್ರತಿಕ್ರಿಯಿಸಿ, ತುಂಬಾ ದುಃಖಕರ ಸಂಗತಿ, ದಯವಿಟ್ಟು ಗಟ್ಟಿಯಾಗಿರಿ, ಓಂ ಶಾಂತಿ ಎಂದು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ:ಆಸ್ಪತ್ರೆಯಲ್ಲಿ ನಟ ತಾರಕರತ್ನ ಆತ್ಮಬಲದಿಂದ ಹೋರಾಡಬೇಕಿದೆ - ಜೂ. ಎನ್ಟಿಆರ್
ಸಾಮಾಜಿಕ ಮಾಧ್ಯಮ ಬಳಕೆ ವಿಚಾರದಲ್ಲಿ ಸಾಕಷ್ಟು ಆಕ್ಟೀವ್ ಆಗಿರುವ ನಟಿ ರಾಖಿ ಸಾವಂತ್ ಇತ್ತೀಚಿನ ದಿನಗಳಲ್ಲಿ ಆಗಾಗ್ಗೆ ತಮ್ಮ ತಾಯಿಯ ಆರೋಗ್ಯದ ಬಗ್ಗೆಯೂ ಮಾಹಿತಿ ಹಂಚಿಕೊಳ್ಳುತ್ತಿದ್ದರು. ಅವರು ಇತ್ತೀಚೆಗೆ ಹಂಚಿಕೊಂಡಿದ್ದ ಭಾವನಾತ್ಮಕ ಪೋಸ್ಟ್ ಒಂದರಲ್ಲಿ, ತಮ್ಮ ತಾಯಿಯ ಚೇತರಿಕೆಗೆ ಪ್ರಾರ್ಥಿಸಲು ಅಭಿಮಾನಿಗಳನ್ನು ಕೇಳಿಕೊಂಡಿದ್ದರು. ಆದ್ರೆ ಜಯಾ ಭೇದಾ ಕೊನೆಯುಸಿರೆಳೆದಿದ್ದು ರಾಖಿ ಕುಟುಂಬಸ್ಥರು ಅತೀವ ದುಃಖದಲ್ಲಿದ್ದಾರೆ.