ಹೈದರಾಬಾದ್ (ತೆಲಂಗಾಣ): ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಇರುವ ಬಾಲಿವುಡ್ ನಟಿ ರಾಖಿ ಸಾವಂತ್ ರಹಸ್ಯವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಗೆಳೆಯ, ಮೈಸೂರಿನ ಆದಿಲ್ ದುರಾನಿ ಜೊತೆ ರಾಖಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಲ್ಲದೇ, ಇಬ್ಬರು ಸಹ ಹೂವಿನ ಹಾರ ಹಾಕಿಕೊಂಡಿರುವ ಫೋಟೋಗಳು ವೈರಲ್ ಆಗಿದ್ದು, ಸಾವಂತ್ ಮತ್ತು ಆದಿಲ್ ವಿವಾಹವನ್ನು ಸಾಕ್ಷೀಕರಿಸುವಂತಿವೆ.
ರಾಖಿ ಸಾವಂತ್ ಮತ್ತು ಆದಿಲ್ ದುರಾನಿ ಸಾಮಾನ್ಯವಾಗಿ ಮಾಧ್ಯಮಗಳು ಸುದ್ದಿಯಲ್ಲೇ ಇರುತ್ತಾರೆ. ಆದಿಲ್ಗಾಗಿ ರಾಖಿ ಮೈಸೂರಿಗೂ ಬಂದಿದ್ದರು. ಇಬ್ಬರು ಸಹ ಬಹಿರಂಗವಾಗಿ ಒಟ್ಟಿಗೆ ಮಾಧ್ಯಮಗಳ ಮುಂದೆ ಬಂದಿದ್ದರು. ಆದಾಗ್ಯೂ, ಇಬ್ಬರೂ ತಮ್ಮ ಮದುವೆ ವಿಷಯವನ್ನು ಮುಚ್ಚಿಟ್ಟು ಗೌಪ್ಯವಾಗಿ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ರಾಖಿ ಮತ್ತು ಆದಿಲ್ ಅವರ ವೈರಲ್ ಫೋಟೋಗಳು ಸಖತ್ ಸದ್ದು ಮಾಡುತ್ತಿವೆ.
ಕಳೆದ ವರ್ಷವೇ ವಿವಾಹ ಬಂಧನ?.. ಡ್ರಾಮಾ ಕ್ವೀನ್ ಎಂದೇ ಹೆಸರಾಗಿರುವ ರಾಖಿ ಸಾವಂತ್ ಚಿಕ್ಕ ವಿಷಯಗಳಿಂದಲೂ ಸುದ್ದಿ ಆಗುತ್ತಲೇ ಇರುತ್ತಾರೆ. ಆದರೆ, ತಮ್ಮ ಮದುವೆಯ ವಿಷಯವನ್ನು ಮಾತ್ರ ತಿಂಗಳುಗಳ ಕಾಲ ರಹಸ್ಯವಾಗಿರಿಸಿದ್ದರಾ ಎಂಬ ಅನುಮಾನ ಈಗ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ, 2022ರ ಮೇ 5ರಂದೇ ಗೆಳೆಯ ಆದಿಲ್ ದುರಾನಿ ಅವರನ್ನು ರಾಖಿ ವರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಸರಳವಾಗಿ ಕೋರ್ಟ್ನಲ್ಲಿ ಮದುವೆ?.. ರಾಖಿ ಮತ್ತು ಆದಿಲ್ ಒಟ್ಟಿಗೆ ಕೊರಳಿಗೆ ಹಾರವನ್ನು ಧರಿಸಿರುವುದು ಆ ವೈರಲ್ ಆಗಿರುವ ಫೋಟೋಗಳಲ್ಲಿ ಕಾಣಬಹುದಾಗಿದೆ. ಇದರೊಂದಿಗೆ ಮದುವೆ ಪ್ರಮಾಣಪತ್ರವನ್ನೂ ಇಬ್ಬರೂ ತಮ್ಮ ಕೈಯಲ್ಲಿ ಇಟ್ಟುಕೊಂಡಿರುವುದು ಮತ್ತು ಮದುವೆಯ ಪುಸ್ತಕಕ್ಕೆ ಸಹಿ ಹಾಕುತ್ತಿರುವ ಫೋಟೋಗಳು ಸಹ ಹರಿದಾಡುತ್ತಿವೆ. ಸಾವಂತ್ ಮತ್ತು ದುರಾನಿ ಸರಳವಾಗಿ ನ್ಯಾಯಾಲಯದಲ್ಲಿ ವಿವಾಹವಾಗಿದ್ದಾರೆ ಎನ್ನಲಾಗುತ್ತಿದೆ.