ಮುಂಬೈ (ಮಹಾರಾಷ್ಟ್ರ):ಕಳೆದ ಹಲವು ದಿನಗಳಿಂದ ಕೆಲ ವಿಷಯವಾಗಿ ನಟಿ ರಾಖಿ ಸಾವಂತ್ ಸುದ್ದಿಯಲ್ಲಿದ್ದಾರೆ. ವೈವಾಹಿಕ ಜೀವನದ ಏರುಪೇರು ಒಂದು ಕಡೆ ಆದರೆ, ತಾಯಿ ನಿಧನ ಮತ್ತೊಂದು ಕಡೆ. ಇದೀಗ ತಮ್ಮ ವೈವಾಹಿಕ ಜೀವನವನ್ನು ಉಳಿಸಿಕೊಳ್ಳಲು ಪತಿ ಆದಿಲ್ ಖಾನ್ ದುರಾನಿ ವಿರುದ್ಧ ಕಾನೂನು ಹೋರಾಟ ಆರಂಭಿಸಿದ್ದಾರೆ. ಈಗಾಗಲೇ ರಾಖಿ ಸಾವಂತ್ ದೂರಿನ ಮೇರೆಗೆ ಪತಿ ಆದಿಲ್ ಖಾನ್ ದುರಾನಿ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ಪತಿ ಆದಿಲ್ ಮೇಲೆ ರಾಖಿ ಹಲ್ಲೆ ಆರೋಪ ಹೊರಿಸಿದ್ದಾರೆ. ಪತಿ ಆದಿಲ್ ಖಾನ್ ದುರಾನಿ ಅವರ ವಿವಾಹೇತರ ಸಂಬಂಧವನ್ನೂ ಕೂಡ ರಾಖಿ ಬಹಿರಂಗಪಡಿಸಿದ್ದಾರೆ.
ಪ್ರಜ್ಞೆ ತಪ್ಪಿ ಬಿದ್ದ ರಾಖಿ ಸಾವಂತ್: ಇದೀಗ ರಾಖಿ ಸಾವಂತ್ ಬಗ್ಗೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ನಿನ್ನೆ (ಫೆಬ್ರವರಿ 7, ಮಂಗಳವಾರ) ರಾತ್ರಿ ಪಾಪರಾಜಿಗಳಿಗೆ ತನ್ನ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ನೀಡುತ್ತಿದ್ದ ವೇಳೆ ರಾಖಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ರಾಖಿ ಸಾವಂತ್ ಮೂರ್ಛೆ ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪಾಪರಾಜಿಗಳ ಗುಂಪಿನ ನಡುವೆ ನಟಿ ರಾಖಿ ಸಾವಂತ್ ಹೋದ ವೇಳೆ ಅವರಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳ ಮಳೆ ಸುರಿಸಲಾಯಿತು. ರಾಖಿ ಸಾವಂತ್ ಮಾಹಿತಿ ನೀಡುತ್ತಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ರಾಖಿ ಸಾವಂತ್ ಮೂರ್ಛೆ ಹೋಗಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ನೆಟ್ಟಿಗರು ಹೇಳಿದ್ದು ಹೀಗೆ:ರಾಖಿ ಸಾವಂತ್ ಮೂರ್ಛೆ ಹೋದ ವಿಡಿಯೋ ಗಮನಿಸಿದ ನೆಟ್ಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಬಹಳ ಧೈರ್ಯವಂತರು, ಕೈಯಿಂದ ಫೋನ್ ಬೀಳಲು ಬಿಡಲಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವ ಸೋಷಿಯಲ್ ಮೀಡಿಯಾ ಬಳಕೆದಾದರರು ಕೂಡ 'ಅವರಿಗೆ ತಲೆಸುತ್ತು ಬಂದರೂ ಕೂಡ ಫೋನ್ ಬಿಡಲಿಲ್ಲ' ಎಂದು ಬರೆದಿದ್ದಾರೆ. ಇನ್ನೊಬ್ಬರು, 'ಯಾರು ಸರಿ ಮತ್ತು ಯಾರು ತಪ್ಪು ಎಂದು ದೇವರಿಗೆ ಮಾತ್ರ ತಿಳಿದಿದೆ' ಎಂದಿದ್ದಾರೆ.